ಏಶ್ಯಾ ಕಪ್: ಸೆ.19ಕ್ಕೆ ಭಾರತ-ಪಾಕಿಸ್ತಾನ ಮುಖಾಮುಖಿ

ದುಬೈ, ಜು.25: ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಸೆ.15ರಿಂದ 28ರ ತನಕ ಏಶ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದ್ದು, ಸೆ.19ರಂದು ಹಾಲಿ ಚಾಂಪಿಯನ್ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಐಸಿಸಿ ಮಂಗಳವಾರ ಏಶ್ಯಾಕಪ್ ಕ್ರಿಕೆಟ್ ಟೂರ್ನಮೆಂಟ್‌ನ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಟೂರ್ನಮೆಂಟ್‌ನಲ್ಲಿ ಭಾರತ ಸತತ ಎರಡು ಏಕದಿನ ಪಂದ್ಯಗಳನ್ನು ಆಡಲಿದೆ. ಮೊದಲ ಪಂದ್ಯದಲ್ಲಿ ಭಾರತ ಸೆೆ.18ರಂದು ಏಶ್ಯಾಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡ ತಂಡವನ್ನು ಎದುರಿಸಲಿದೆ. ಮರುದಿನ ಭಾರತಕ್ಕೆ ಪಾಕಿಸ್ತಾನದ ಸವಾಲು ಎದುರಾಗಲಿದೆ.
ಭಾರತ , ಪಾಕಿಸ್ತಾನ, ಶ್ರೀಲಂಕಾ , ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಟೂರ್ನಮೆಂಟ್‌ನಲ್ಲಿ ಅವಕಾಶ ದೃಢಪಡಿಸಿವೆ.ಯುಎಇ, ಸಿಂಗಾಪುರ, ಒಮನ್, ನೇಪಾಳ, ಮಲೇಷ್ಯಾ ಮತ್ತು ಹಾಂಕಾಂಗ್ ತಂಡಗಳು ಏಶ್ಯಾಕಪ್‌ನಲ್ಲಿ ಅರ್ಹತೆ ಪಡೆಯಲು ಹಣಾಹಣಿ ನಡೆಸಲಿವೆ. ‘ಎ’ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಕ್ವಾಲಿಫೈಯರ್ ತಂಡ. ‘ಬಿ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಸೂಪರ್ 4 ಹಂತಕ್ಕೇರಲು ಸೆಣಸಾಡಲಿವೆೆ.
ಪ್ರತಿಯೊಂದು ಗುಂಪಿನಿಂದಲೂ ಅಗ್ರ ತಲಾ ಎರಡು ತಂಡಗಳು ಸೂಪರ್-4 ಹಂತಕ್ಕೇರಲಿವೆ. ಸೂಪರ್-4ನಲ್ಲಿ ಜಯ ಗಳಿಸುವ ಎರಡು ತಂಡಗಳು ಸೆ.28ರಂದು ಫೈನಲ್ ಪಂದ್ಯದಲ್ಲಿ ಆಡಲಿವೆ.







