ಗರಿಷ್ಟ ವೆಯಕ್ತಿಕ ಸ್ಕೋರ್ ಗಳಿಸಿದ ಪವನ್ ಶಾ
ಅಂಡರ್-19: ಎರಡನೇ ಯೂತ್ ಟೆಸ್ಟ್

ಹಂಬನ್‌ಟೋಟ, ಜು.25: ಮಹಾರಾಷ್ಟ್ರದ ಯುವ ಬ್ಯಾಟ್ಸ್‌ಮನ್ ಪವನ್ ಶಾ ಶ್ರೀಲಂಕಾ ವಿರುದ್ಧದ ಎರಡನೇ ಹಾಗೂ ಅಂತಿಮ ಅಂಡರ್-19 ಯೂತ್ ಟೆಸ್ಟ್ ಪಂದ್ಯದಲ್ಲಿ 282 ರನ್ ಗಳಿಸಿದ್ದಾರೆ. ಅಂಡರ್-19 ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಆಟಗಾರನೆಂಬ ಕೀರ್ತಿಗೆ ಭಾಜನರಾಗಿರುವ ಶಾ ಒಂದೇ ಓವರ್‌ನಲ್ಲಿ ಸತತ ಆರು ಬೌಂಡರಿಗಳನ್ನು ಸಿಡಿಸಿ ಗಮನ ಸೆಳೆದರು. ಪುಣೆಯ 18ರ ಹರೆಯದ ಬಲಗೈ ದಾಂಡಿಗನ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 613 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ. ಕೇವಲ 18 ರನ್‌ನಿಂದ ತ್ರಿಶತಕ ವಂಚಿತರಾದ ಶಾ 332 ಎಸೆತಗಳನ್ನು ಎದುರಿಸಿ 33 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಏಳು ಗಂಟೆಗಳ ಕಾಲ ಕ್ರೀಸ್‌ನಲ್ಲಿದ್ದ ಶಾ ಆಸ್ಟ್ರೇಲಿಯದ ಕ್ಲಿಂಟನ್ ಪೀಕ್ಸ್ ದಾಖಲೆ ಮುರಿಯಲು ವಿಫಲರಾದರು. ಕ್ಲಿಂಟನ್ 1995ರಲ್ಲಿ ಅಂಡರ್-19 ಪಂದ್ಯದಲ್ಲಿ ಔಟಾಗದೆ 304 ರನ್ ಗಳಿಸಿದ್ದಾರೆ. ಈ ದಾಖಲೆಯನ್ನು ಈವರೆಗೆ ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ.
ಶಾ ಇನಿಂಗ್ಸ್‌ನ 108ನೇ ಓವರ್‌ನಲ್ಲಿ ಶ್ರೀಲಂಕಾದ ಎಡಗೈ ವೇಗದ ಬೌಲರ್ ವಿಚಿತ್ರ ಪೆರೇರ ವಿರುದ್ಧ ಸತತ ಆರು ಬೌಂಡರಿಗಳನ್ನು ಸಿಡಿಸಿದರು. ಇದು ಶಾ ಅವರ ಇನಿಂಗ್ಸ್‌ನ ಮುಖ್ಯ ಹೈಲೈಟ್ಸ್ ಎನಿಸಿಕೊಂಡಿದೆ. 1982ರಲ್ಲಿ ಸಂದೀಪ್ ಪಾಟೀಲ್ ಮ್ಯಾಂಚೆಸ್ಟರ್‌ನಲ್ಲಿ ಬಾಬ್ ವಿಲ್ಲಿಸ್ ವಿರುದ್ಧ ಒಂದೇ ಓವರ್‌ನಲ್ಲಿ ಸತತ 6 ಬೌಂಡರಿಗಳನ್ನು ಬಾರಿಸಿದ್ದರು. ವಿಲ್ಲಿಸ್ ಒಂದು ನೋ-ಬಾಲ್ ಸಹಿತ ಓವರ್‌ವೊಂದರಲ್ಲಿ ಏಳು ಎಸೆತಗಳನ್ನು ಎಸೆದಿದ್ದರು.
ದ್ವಿಶತಕ ಸಿಡಿಸಿದ ಪವನ್ ಶಾ ಆರಂಭಿಕ ಆಟಗಾರ ಅಥರ್ವ(177) ಅವರೊಂದಿಗೆ ಎರಡನೇ ವಿಕೆಟ್‌ಗೆ 263 ರನ್ ಹಾಗೂ ನಿಖಿಲ್ ವಡೇರ(64) ಅವರೊಂದಿಗೆ 167 ರನ್ ಜೊತೆಯಾಟ ನಡೆಸಿದ್ದರು.
ಭಾರತದ ಬೃಹತ್ ಮೊತ್ತಕ್ಕೆ ಉತ್ತರವಾಗಿ ಶ್ರೀಲಂಕಾ ಎರಡನೇ ದಿನದಾಟದಂತ್ಯಕ್ಕೆ 4 ವಿಕೆಟ್‌ಗಳ ನಷ್ಟಕ್ಕೆ 140 ರನ್ ಗಳಿಸಿದೆ. ಭಾರತದ ಎಡಗೈ ವೇಗದ ಬೌಲರ್ ಮೋಹಿತ್ ಜಾಂಗ್ರಾ(3-43) ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.







