ಹುಬ್ಬಳ್ಳಿ: ಮೈಮೇಲೆ ಮಲ ಸುರಿದು ಪ್ರತಿಭಟನೆ ನಡೆಸಿದ ಪೌರ ಕಾರ್ಮಿಕರು
ಹುಬ್ಬಳ್ಳಿ, ಜು. 26: ನಾಲ್ಕು ತಿಂಗಳಿಂದ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಪೌರ ಕಾರ್ಮಿಕರು ಮೈಮೇಲೆ ಮಲ ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ ವಿಲಕ್ಷಣ, ಅಸಹಾಯಕ ಘಟನೆ ನಗರದಲ್ಲಿ ನಡೆದಿದೆ.
ಗುರುವಾರ ಬೆಳಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಗೆ ಕಸಪೊರೆಕೆ ಹಿಡಿದು ಬಂದ 1ಸಾವಿರಕ್ಕೂ ಹೆಚ್ಚು ಮಂದಿ ಪೌರ ಕಾರ್ಮಿಕರು, ವೇತನ ಬಿಡುಗಡೆಗೆ ಆಗ್ರಹಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಇಬ್ಬರು ಕಾರ್ಮಿಕರು ಬಿಂದಿಗೆಯಲ್ಲಿ ತಂದಿದ್ದ ಮಲವನ್ನು ಮೈಮೇಲೆ ಸುರಿದುಕೊಂಡಿದ್ದಾರೆ.
ನಾಲ್ಕು ತಿಂಗಳಿಂದ ಬಾಕಿ ಇರುವ ಪೌರ ಕಾರ್ಮಿಕ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಪೌರ ಕಾರ್ಮಿಕರಿಗೆ ನೇರವಾಗಿ ಪಾಲಿಕೆಯೇ ವೇತನ ಪಾವತಿಸಬೇಕು. ಅಲ್ಲದೆ, ನಕಲಿ ಪೌರ ಕಾರ್ಮಿಕರ ಪತ್ತೆಗೆ ಕ್ರಮ ಕೈಗೊಳ್ಳಬೇಕೆಂದು ಪೌರ ಕಾರ್ಮಿಕರು ಒತ್ತಾಯಿಸಿದ್ದಾರೆ.
ಬಸವರಾಜ ದೊಡ್ಡಮನಿ, ಪ್ರಶಾಂತ್ ಮನಮಟಗಿ, ರೇಶ್ಮಾಮುಗ್ಗಿ ಮಲ ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ ಪೌರ ಕಾರ್ಮಿಕರು. ಪೌರ ಕಾರ್ಮಿಕರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ವೇಳೆ ಸ್ಥಳದಲ್ಲೆ ಇದ್ದ ಪೊಲೀಸರು, ಪಾಲಿಕೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಮೂಕ ಪ್ರೇಕ್ಷಕರಾಗಿದ್ದರು.
ಪೌರ ಕಾರ್ಮಿಕರ ಬಂಧನ: ಅನಂತರ ಸ್ಥಳಕ್ಕೆ ಆಗಮಿಸಿದ ಹೆಚ್ಚವರಿ ಪೊಲೀಸ್ ಸಿಬ್ಬಂದಿ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ.
‘ಗುತ್ತಿಗೆ ಪದ್ಧತಿಯಡಿ ಪೌರ ಕಾರ್ಮಿಕರ ನೇಮಕಾತಿಯನ್ನು ಕೈಬಿಟ್ಟು ನೇರ ನೇಮಕ ಮಾಡಿಕೊಳ್ಳಬೇಕು. 4 ತಿಂಗಳ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಬೇಕು, ಕೆಲಸದಿಂದ ತೆಗೆದು ಹಾಕಿರುವ ಪೌರ ಕಾರ್ಮಿಕರನ್ನು ಪುನಃ ನೇಮಿಸಿಕೊಳ್ಳಬೇಕು. ಬಾಕಿ ವೇತನ ಕೇಳಿದ್ದಕ್ಕೆ ಪೌರ ಕಾರ್ಮಿಕರ ಬಂಧನ ಸರಿಯಲ್ಲ’
-ವಿಜಯ್ ಗುಂಟ್ರಾಳ ಎಸ್ಸಿ-ಎಸ್ಟಿ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ
ಗಡಿಪಾರಿಗೆ ಒತ್ತಾಯ: ‘ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಹಾಗೂ ಆಯುಕ್ತರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪಾಲಿಕೆ ಸದಸ್ಯರು, ಪೌರಕಾರ್ಮಿಕರ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರುವ ಧಾರವಾಡ ಜಿಲ್ಲಾ ಎಸ್ಸಿ-ಎಸ್ಟಿ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.