ಹೆಜಮಾಡಿಯಲ್ಲಿ ರಸ್ತೆ ಮಧ್ಯೆ ವಿದ್ಯುತ್ ಕಂಬ !
ತೆರವಿಗೆ ಒತ್ತಾಯ

ಪಡುಬಿದ್ರೆ, ಜು. 26: ಹೆಜಮಾಡಿ ಪೇಟೆಯಿಂದ ಕೋಡಿ ಸಂಪರ್ಕಿಸುವ ರಸ್ತೆಯ ಮಧ್ಯೆದಲ್ಲಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೆಜಮಾಡಿಯಿಂದ ಕೋಡಿ, ಸುಲ್ತಾನ್ ಉತ್ತರ, ದಕ್ಷಿಣ ರಸ್ತೆಯನ್ನು ಸಂಪರ್ಕಿಸುವ ಈ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಓಡಾಡುತ್ತಿವೆ. ಇತ್ತೀಚೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆದಿದ್ದು, ಪಕ್ಕದಲ್ಲಿ ಮೋರಿ ನಿರ್ಮಿಸಲಾಗಿದೆ. ಕಾಮಗಾರಿಯ ವೇಳೆ ರಸ್ತೆಯಲ್ಲಿದ್ದ ವಿದ್ಯುತ್ ಕಂಬವನ್ನು ತೆರವುಗೊಳಿಸದೆ ಡಾಮರೀಕರಗೊಳಿಸಲಾಗಿದೆ. ಇನ್ನೂ ಕಾಮಗಾರಿ ಬಾಕಿ ಇದ್ದು, ಬಾಕಿ ಇರುವ ಕಾಮಗಾರಿಯ ಬಳಿ ಇರುವ ವಿದ್ಯುತ್ ಕಂಬದ ಬಳಿ ಬ್ಯಾರಿಕೇಡ್ ಇರಿಸಲಾಗಿದೆ.
ವಿದ್ಯುತ್ ಕಂಬ ರಸ್ತೆ ಮಧ್ಯೆ ಇರುವುದರಿಂದ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ವಿದ್ಯುತ್ ಕಂಬವನ್ನು ರಸ್ತೆಯಿಂದ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಆದರೂ ಸಂಬಂಧಪಟ್ಟ ಇಲಾಖೆ ಇನ್ನೂ ತೆರವುಗೊಳಿಸಲಿಲ್ಲ. ಇನ್ನೂ ರಸ್ತೆಯ ಕಾಮಗಾರಿ ಬಾಕಿ ಇದ್ದು, ಅದಕ್ಕಿಂತ ಮೊದಲೇ ಇನ್ನುಳಿದಿರುವ ವಿದ್ಯುತ್ ಕಂಬ ಹಾಗೂ ಈಗ ರಸ್ತೆಯಲ್ಲಿ ಬಾಕಿಯಾಗಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





