‘ಸೈನಿಕರಿಗೆ ಅವಹೇಳನ ಮಾಡುವವರು ಭಾರತದಲ್ಲಿರಲು ಯೋಗ್ಯರಲ್ಲ’
ಕಾರ್ಗಿಲ್ ವಿಜಯ ದಿನದ ಆಚರಣೆಯಲ್ಲಿ ವಿಲಾಸ್

ಉಡುಪಿ, ಜು.26: ದೇಶದ ರಕ್ಷಣೆಗಾಗಿ ಪ್ರಾಣತೆತ್ತ ಸೇನಾನಿ ಹಾಗೂ ಭಾರತ ಮಾತೆಯನ್ನು ಹೀಯಾಳಿಸುವ, ಕೀಳು ಮಟ್ಟಕ್ಕಿಳಿದು ಅವಹೇಳನಕಾರಿ ಯಾಗಿ ಮಾತನಾಡುವ ಕಿಡಿಗೇಡಿಗಳು ಭಾರತದಲ್ಲಿರಲು ಯೋಗ್ಯರಲ್ಲ ಎಂದು ವಿಎಚ್‌ಪಿ ಜಿಲ್ಲಾಧ್ಯಕ್ಷ ಹಾಗೂ ಉದ್ಯಮಿ ಪಿ. ವಿಲಾಸ್ ನಾಯಕ್ ಹೇಳಿದ್ದಾರೆ.
ಸ್ವಚ್ಛ ಭಾರತ್ ಫ್ರೆಂಡ್ಸ್, ಸಂತೆಕಟ್ಟೆ ಲಯನ್ಸ್ ಕ್ಲಬ್ ಮತ್ತು ಬೆಂಗಳೂರಿನ ಸ್ಪಂದನಾ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಹುತಾತ್ಮ ಸೈನಿಕರ ಸ್ಮಾರಕದಲ್ಲಿ ಬುಧವಾರ ನಡೆದ ಕಾರ್ಗಿಲ್ ವಿಜಯ ದಿನದ ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಪ್ರತಿಕ್ಷಣವೂ, ಅತ್ಯಂತ ಪ್ರತಿಕೂಲ ಪರಿಸ್ಥಿತಿಗಳಲ್ಲೂ ದೇಶದ ಗಡಿ ಕಾಯುವ ಹೆಮ್ಮೆಯ ಯೋಧರನ್ನು ಪ್ರತಿದಿನವೂ ಸ್ಮರಿಸಬೇಕಿದೆ. ದೇಶದಲ್ಲಿದ್ದುಕೊಂಡೇ ಈ ನೆಲದ ಸಾರ್ವಭೌಮತೆಗೆ ಧಕ್ಕೆ ತರಲು ಹುನ್ನಾರ ನಡೆಯುತ್ತಿದೆ. ಸೈನಿಕರನ್ನು ಅವಹೇಳನ ಮಾಡುವ ವ್ಯಕ್ತಿಗಳು ಈ ದೇಶದಲ್ಲಿರಲು ಯೋಗ್ಯರಲ್ಲ ಎಂದರು. ಭಾರತೀಯ ವಾಯುಪಡೆಯ ನಿವೃತ್ತ ಯೋಧ ಪಿ. ದಿನೇಶ್ ನಾಯಕ್ ಕಾರ್ಗಿಲ್ ವಿಜಯದ ಕುರಿತು ವಿವರಿಸಿದರು. ನಗರಸಭಾ ಸದಸ್ಯ ಶ್ಯಾಮ್ ಪ್ರಸಾದ್ ಕುಡ್ವ, ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಮಾತನಾಡಿದರು.
ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಸ್ತುತ ಮಾಜಿ ಸೈನಿಕರ ವೇದಿಕೆಯ ಕಾರ್ಯದರ್ಶಿ ಕೆ. ಗಣೇಶ್ ರಾವ್ ಅವರನ್ನು ಸನ್ಮಾನಿಸ ಲಾಯಿತು. ಸಂತೆಕಟ್ಟೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಂದೀಪ್ ನಾಯಕ್, ಹರಿಪ್ರಸಾದ್, ಬಾಲಕೃಷ್ಣ ಶೆಟ್ಟಿ, ಚೇತನಾ ಶೆಣೈ, ಸುಷ್ಮಾ ನಾಯ್ಕಾ, ರಂಜಿತ್ ಶೆಟ್ಟಿ, ತಾರನಾಥ್, ನಾಗರಾಜ್ ಭಂಡಾರ್ಕರ್, ಜ್ಯೋತಿ ಶೇಟ್, ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.
ಗಣೇಶ್ ಪ್ರಸಾದ್ ಜಿ. ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ. ಮಹೇಶ್ ಶೆಣೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







