ದ.ಕ. ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಭಾರೀ ದಂಧೆ: ಕ್ಯಾಂಪಸ್ ಫ್ರಂಟ್ ಆರೋಪ
ಏಜೆಂಟ್ ಬಳಸಿ ಸಂಸ್ಥೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ
ಮಂಗಳೂರು, ಜು.26: ದ.ಕ. ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ದಂಧೆಯು ಹೆಚ್ಚುತ್ತಿದ್ದು, ಹಲವಾರು ವಿದ್ಯಾರ್ಥಿಗಳು ಈ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಶಾಲಾ ಕಾಲೇಜುಗಳು ಆರಂಭವಾಗಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ದಾಖಲಾತಿಯನ್ನು ಅಧಿಕಗೊಳಿಸುವ ಭರದಲ್ಲಿ ಏಜೆಂಟಗಳನ್ನು ಬಳಸಿ ವಿದ್ಯಾರ್ಥಿಗಳಿಂದ ದುಪ್ಪಟ್ಟು ಹಣವನ್ನು ದೋಚುತ್ತಿವೆ ಎಂದು ಕ್ಯಾಂಪಸ್ ಫ್ರಂಟ್ ಆರೋಪಿಸಿದೆ.
ಜಿಲ್ಲೆಯಲ್ಲಿ ದಿನಕ್ಕೊಂದು ಖಾಸಗಿ ಸಂಸ್ಥೆಗಳು ಹುಟ್ಟುತ್ತಿದ್ದು, ಶಿಕ್ಷಣವು ವ್ಯಾಪಾರೀಕರಣದತ್ತ ಸಾಗುತ್ತಿದೆ. ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕೆಲ ಏಜೆಂಟ್ಗಳು ಶೈಕ್ಷಣಿಕ ಮಾರ್ಗದರ್ಶನದ ನೆಪವನ್ನಿಟ್ಟುಕೊಂಡು ಸಲಹಾ ಕೇಂದ್ರಗಳು ನಗರದ ಎಂಪಾಯರ್ ಮಾಲ್, ನಳಪಾಡ್ ರೆಸಿಡೆನ್ಸಿಯಲ್ಲಿ ಕಾರ್ಯಚರಿಸುತ್ತಿವೆ. ಅಲ್ಲಿ ಕಾಲೇಜುಗಳನ್ನು ವೈಭವೀಕರಿಸಿ ವಿದ್ಯಾರ್ಥಿಗಳನ್ನು ಆಕರ್ಷಿಸಿ ತಮಗೆ ಲಾಭವಾಗುವಂತಹ ಕಾಲೇಜುಗಳಿಗೆ ದಾಖಲಾತಿ ಮಾಡುತ್ತಿರುವುದು ಕಂಡುಬರುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ದೂರಿದೆ.
ಜಿಲ್ಲೆಯಲ್ಲಿ ಬೆರಳಣಿಕೆಯಷ್ಟು ಸರಕಾರಿ ಕಾಲೇಜುಗಳಿದ್ದು, ಅಲ್ಲಿ ನಿರ್ದಿಷ್ಟ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮಾತ್ರ ದಾಖಲಾತಿ ನೀಡುತ್ತಿದ್ದಾರೆ. ಸರಕಾರಿ ಕಾಲೇಜುಗಳಲ್ಲಿ ಸರಿಯಾದ ವ್ಯವಸ್ಥೆಗಳೂ ಇಲ್ಲ. ಅಲ್ಲದೆ, ವೃತ್ತಿಪರ ಕೋರ್ಸ್ಗಳಿರುವ ಸರಕಾರಿ ಕಾಲೇಜುಗಳು ತೆರೆಯದಿರುವುದೇ ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆಯೆತ್ತಲು ಮುಖ್ಯ ಕಾರಣವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆರೋಪಿಸಿದೆ.
ಜಿಲ್ಲೆಯಲ್ಲಿ ಶಿಕ್ಷಣದ ವ್ಯಾಪಾರೀಕರಣದ ಜಾಲವು ಸಕ್ರಿಯವಾಗಿದ್ದು, ಇದರ ಬೆಳವಣಿಗೆಯಿಂದ ಹಲವಾರು ವಿದ್ಯಾರ್ಥಿಗಳು ಬಲಿಪಶುವಾಗುತ್ತಿದ್ದಾರೆ. ಖಾಸಗಿ ಸಂಸ್ಥೆಗಳ ವ್ಯಾಮೋಹದಿಂದ ಜಿಲ್ಲೆಯಲ್ಲಿ ಶಿಕ್ಷಣದ ಮೌಲ್ಯವು ಕುಸಿಯುತ್ತಿದ್ದು, ಶೀಘ್ರ ಶಿಕ್ಷಣ ಇಲಖೆಯು ಇಂತಹ ಖಾಸಗಿ ಸಂಸ್ಥೆಗಳ ಮೇಲೆ ನಿಗಾ ಇಟ್ಟು ಏಜೆಂಟುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾಧ್ಯಕ್ಷ ಇಮ್ರಾನ್ ಪಿ.ಜೆ. ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.