ಲೇಡಿಗೋಶನ್ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಡಿವೈಎಫ್‌ಐ ಪ್ರತಿಭಟನೆ

ಮಂಗಳೂರು, ಜು.26:ದ.ಕ. ಜಿಲ್ಲೆ ಸಹಿತ ಆಸುಪಾಸಿನ ಮೂರ್ನಾಲ್ಕು ಜಿಲ್ಲೆಗಳ ಆರ್ಥಿಕವಾಗಿ ಹಿಂದುಳಿದ ಜನರ ಆಶಾಕಿರಣವಾಗಿರುವ ಏಕೈಕ ಸರಕಾರಿ ಆಸ್ಪತ್ರೆಯಾದ ಲೇಡಿಗೋಷನ್‌ನಲ್ಲಿ ಹಲವು ವರ್ಷಗಳಿಂದ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ ಬಾಣಂತಿಯರು ಸಮಸ್ಯೆ ಎದುರಿಸುತ್ತಿದ್ದರೂ ಸಂಬಂಧಪಟ್ಟವರು ಸೂಕ್ತ ಕ್ರಮ ಜರುಗಿಸುತ್ತಿಲ್ಲ ಎಂದು ಆರೋಪಿಸಿ ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿಯು ಗುರುವಾರ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿತು.
ಆಸ್ಪತ್ರೆಯ ಹಳೆಯ ಕಟ್ಟಡವನ್ನು ಭಾಗಶಃ ಕೆಡವಿ ಹೊಸ ಕಟ್ಟಡ ನಿರ್ಮಿಸಲು ಮುಂದಾಗಿ ಹಲವು ವರ್ಷಗಳಾದರೂ ಪೂರ್ಣಗೊಂಡಿಲ್ಲ. ಬಾಣಂತಿಯರು ಮತ್ತು ಅವರ ಕುಟುಂಬಸ್ಥರು ಇದರಿಂದ ತೊಂದರೆಗೀಡಾಗಿದ್ದಾರೆ. ವೈದ್ಯರು ಮತ್ತು ಹೆಚ್ಚುವರಿ ಸಿಬ್ಬಂದಿಯ ನೇಮಕವೂ ಆಗದೆ ಸಮಸ್ಯೆಯಾಗಿದೆ. ಇವೆಲ್ಲವನ್ನೂ ಪರಿಹರಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್ ಸರಕಾರದ ಧೋರಣೆಯನ್ನು ಖಂಡಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಸಾದಿಕ್ ಕಣ್ಣೂರು, ನವೀನ್ ಕೊಂಚಾಡಿ, ಆಶಾ ಬೋಳೂರು, ನಿತಿನ್ ಕುತ್ತಾರ್, ಮನೋಜ್ ವಾಮಂಜೂರು, ರಫೀಕ್ ಹರೇಕಳ, ಮಾಧುರಿ ಬೋಳಾರ, ಯೋಗಿಶ್ ಜಪ್ಪಿನಮೊಗರು ಪಾಲ್ಗೊಂಡಿದ್ದರು.







