ಬಿಪಿಎಲ್ ಪಡಿತರದಾರರಿಗೆ ಉಚಿತ, ಎಪಿಎಲ್‌ದಾರರಿಗೆ ಶೇ.30 ಚಿಕಿತ್ಸಾ ವೆಚ್ಚ: ಜಗನ್ನಾಥ್
ಆರೋಗ್ಯ ಕರ್ನಾಟಕ ಯೋಜನೆ ಮಾಹಿತಿ ಶಿಬಿರ

ಪುತ್ತೂರು, ಜು. 26: ಯಶಸ್ವಿನಿ ಯೋಜನೆ ಸೇರಿದಂತೆ ಇತರ ಎಲ್ಲಾ ಆರೋಗ್ಯ ಸಂಬಂಧಿಸಿದ ಯೋಜನೆಗಳನ್ನು ವಿಲೀನಗೊಳಿಸಿ ರಾಜ್ಯ ಸರಕಾರ ನೂತನವಾಗಿ ಜಾರಿಗೆ ತಂದಿರುವ ಆರೋಗ್ಯ ಕರ್ನಾಟಕ(ಯುನಿವರ್ಸಲ್ ಹೆಲ್ತ್‌ಕೇರ್) ಯೋಜನೆಯ ಮೂಲಕ ಬಿಪಿಎಲ್ ಪಡಿತರ ಚೀಟಿ ಹೊಂದಿರು ವವರಿಗೆ ಉಚಿತ ಚಿಕಿತ್ಸೆ ಹಾಗೂ ಎಪಿಎಲ್ ಪಡಿತರ ಚೀಟಿದಾರರಿಗೆ ಶೇ.30ರಷ್ಟು ಚಿಕಿತ್ಸಾ ವೆಚ್ಚವನ್ನು ಸರಕಾರ ಪಾವತಿಸಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೋಡೆಲ್ ಅಧಿಕಾರಿ ಜಗನ್ನಾಥ ಹೇಳಿದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ವತಿಯಿಂದ ಗುರುವಾರ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಪುತ್ತೂರು ತಾಲೂಕಿನ ಸಹಕಾರಿ ಸಂಘಗಳ ಕಾರ್ಯನಿರ್ವಹಣಾಧಿಕಾರಿಗೆ ನಡೆಸಲಾದ ಆರೋಗ್ಯ ಕರ್ನಾಟಕ ಯೋಜನೆ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು.
ಜನಸಾಮಾನ್ಯರಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸರಕಾರ ‘ಆರೋಗ್ಯ ಕರ್ನಾಟಕ’ ಯೋಜನೆಯಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಆರೋಗ್ಯ ಸೇವೆಗಳನ್ನು ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಅಥವಾ ಅತ್ಯಲ್ಪ ಸೇವಾ ಶುಲ್ಕದೊಂದಿಗೆ ಪಡೆಯಬಹುದಾಗಿದೆ. ಕ್ಲಿಷ್ಟಕರ ದ್ವಿತೀಯ ಹಂತ ಮತ್ತು ತೃತೀಯ ಹಂತದ ಸೇವೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಒಂದು ವೇಳೆ ಅಲ್ಲಿ ಸೇವೆ ಲಭ್ಯವಿಲ್ಲದಿದ್ದಲ್ಲಿ ವೈದ್ಯರ ಶಿಫಾರಸು ಮೂಲಕ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಯೋಜನೆಯಡಿ ಅರ್ಹತಾ ರೋಗಿ ಮತ್ತು ಸಾಮಾನ್ಯ ರೋಗಿ ಎಂದು ಎರಡು ವರ್ಗಗಳಲ್ಲಿ ಚಿಕಿತ್ಸೆ ನೀಡಲಾಗುವುದು. ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ 2013ರಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅರ್ಹತಾ ರೋಗಿಗಳಿಗೆ ಬಹುತೇಕ ಉಚಿತ ಚಿಕಿತ್ಸೆ ದೊರೆಯಲಿದೆ. ಎಪಿಎಲ್ ಪಡಿತರ ಅಥವಾ ಯಾವುದೇ ಪಡಿತರ ಚೀಟಿ ಹೊಂದಿಲ್ಲದ ಸಾಮಾನ್ಯ ರೋಗಿಗಳಿಗೆ ಯೋಜನೆಯ ಪ್ಯಾಕೇಜ್ ದರದ ಶೇ.30ರಷ್ಟನ್ನು ಸರಕಾರ ಭರಿಸಲಾಗುತ್ತದೆ ಎಂದು ಹೇಳಿದ ಅವರು ಆ.15ರಿಂದ ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಯೋಜನೆಯು ಜ್ಯಾರಿಯಾಗಲಿದ್ದು ಬಳಿಕ ಈ ಯೋಜನೆಯ ಜೊತೆಗೆ ಆದೂ ವಿಲೀನಗೊಂಡು ರೂ.5ಲಕ್ಷದ ತನಕ ಉಚಿತ ಚಿಕಿತ್ಸೆ ದೊರೆಯಲಿದೆ ಎಂದು ಹೇಳಿದರು.
ರಾಜ್ಯದ 11 ಜಿಲ್ಲಾ ಆಸ್ಪತ್ರೆಗೆಳಲ್ಲಿ ಆರೋಗ್ಯ ಕಾರ್ಡನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಣೆಯಾಗಲಿದೆ. ಸಪ್ಟಂಬರ್ ತಿಂಗಳಿನಿಂದ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಕಾರ್ಡ್ ವಿತರಣೆ ಪ್ರಕ್ರಿಯೆಯನ್ನು ಆರಂಭಗೊಳ್ಳುವ ನಿರೀಕ್ಷೆಯಿದೆ. ಐವರು ಸದಸ್ಯರಿರುವ ಒಂದು ಕುಟುಂಬಕ್ಕೆ ನಿರ್ದಿಷ್ಟ ದ್ವಿತೀಯ ಹಂತದ ಆರೋಗ್ಯ ಚಿಕಿತ್ಸೆಗಾಗಿ ವಾರ್ಷಿಕ 30, 000 ರೂ.ವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ತೃತೀಯ ಹಂತದ ಆರೋಗ್ಯ ಚಿಕಿತ್ಸೆಗಳಿಗೆ ಕುಟುಂಬ ಒಂದಕ್ಕೆ ವಾರ್ಷಿಕ 1.50 ಲಕ್ಷ ರೂ.ವರೆಗೆ ನೆರವು ಲಭ್ಯ. ನಿಗದಿತ ಮಿತಿಯು ಪೂರ್ಣವಾಗಿ ಉಪಯೋಗವಾದ ನಂತರ ತೃತೀಯ ಹಂತದ ತುರ್ತು ಚಿಕಿತ್ಸೆಗೆ ಹೆಚ್ಚಿನ 50 ಸಾವಿರ ರೂ.ಗಳ ನೆರವು ಮಂಜೂರಾದ ಪ್ಯಾಕೇಜ್ ದರಗಳಲ್ಲಿ ಲಭ್ಯವಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕ ಗೋಪಾಲಯ್ಯ, ಪಶಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸವಣೂರು ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಸ್ವಾಗತಿಸಿ, ವಂದಿಸಿದರು. ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಖಾರ್ಯನಿರ್ವಹಣಾಧಿಕಾರಿಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ಹಾಗೂ ಇತರ ಸಹಕಾರ ಸಂಘಗಳ ಕಾರ್ಯನಿರ್ವಹಣಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಯೋಜನೆ ಲಭ್ಯವಿರುವ ಆಸ್ಪತ್ರೆಗಳು:
ಪುತ್ತೂರಿನಲ್ಲಿ ಆದರ್ಶ, ಪ್ರಗತಿ, ಚೇತನಾ, ಮಹಾವೀರ ಮಂಗಳೂರಿನಲ್ಲಿ ಎ.ಜೆ ಶೆಟ್ಟಿ, ಯೆನೆಪೊಯ, ಇಂಡಿಯಾನ, ಒಮೆಗಾ, ಯುನಿಟಿ, ಕಣಚ್ಚೂರು, ಕೆ.ಎಂ.ಸಿ ಜ್ಯೋತಿ ಹಾಗೂ ಕೆಎಂಸಿ ಅತ್ತಾವರ ಆಸ್ಪತ್ರೆಗಳಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಸೌಲ್ಯಭ್ಯಗಳು ಅನ್ವಯವಾಗಲಿದ್ದು ಸರಕಾರಿ ಆಸ್ಪತ್ರೆಯಿಂದ ಶಿಪಾರಸ್ಸು ಮಾಡಿದಲ್ಲಿ ಮಾತ್ರವೇ ಯೋಜನೆ ಸೌಲಭ್ಯ ಪಡೆಯಬಹುದು
-ಜಗನ್ನಾಥ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೋಡೆಲ್ ಅಧಿಕಾರಿ







