ಪ್ರೀತಿಯಿಂದ ಮಾಡುವ ಕೆಲಸಕ್ಕೆ ಹಿಂಜರಿಕೆ ಬೇಡ: ಚಿತ್ರ ನಟ ರಿಷಿ

ಬೆಂಗಳೂರು, ಜು.26: ಪ್ರೀತಿಯಿಂದ ಮಾಡಲು ಸಾಧ್ಯವಿರುವ ಯಾವುದೇ ಕೆಲಸದ ಬಗ್ಗೆ ಹಿಂಜರಿಕೆ, ಭಯ ಬೇಡ ಎಂದು ಚಿತ್ರ ನಟ ರಿಷಿ ಹೇಳಿದ್ದಾರೆ.
ಗುರುವಾರ ಶೇಷಾದ್ರಿಪುರಂ ಕಾಲೇಜಿನಲ್ಲಿ ನಡೆದ 2018-19ರ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿ, ತಮ್ಮ ಕಾಲೇಜು ದಿನಗಳನ್ನು ಮೆಲುಕು ಹಾಕಿದ ಅವರು, ಕಾಲೇಜು ದಿನಗಳಲ್ಲಿ ನೀವೇನು ಮಾಡುತ್ತೀರೋ, ಅದೇ ನಿಮ್ಮ ಬದುಕನ್ನು ನಿರ್ಧರಿಸುತ್ತದೆ. ಹಾಗಾಗಿ ನಿಮ್ಮ ಗುರುಗಳ ಆಯ್ಕೆಯ ವಿಷಯದಲ್ಲೂ ಎಚ್ಚರವಹಿಸಬೇಕು. ಯಾಕೆಂದರೆ ಅವರಂತೇ ನೀವಾಗುತ್ತೀರಿ ಎಂದು ಹೇಳಿದರು.
ನಟನಾಗಿರುವುದು ಯಾವಾಗಲೂ ಸವಾಲು. ನಾನು ಎಲ್ಲದರಿಂದಲೂ ಸ್ಪೂರ್ತಿಯನ್ನು ಪಡೆಯುತ್ತೇನೆ. ಈಗ ಇಲ್ಲೇ ನೃತ್ಯ ಮಾಡಿದ ಹುಡುಗಿಯಿಂದ ಸ್ಫೂರ್ತಿ ಪಡೆದೆ. ನಾನು ಎಲ್ಲೇ ಹೋಗಲಿ, ಏನನ್ನೇ ನೋಡಲಿ ಅದರಿಂದ ಸ್ಫೂರ್ತಿ ಪಡೆಯುತ್ತೇನೆ ಎಂದರು.
ಇಂಜಿನಿಯರಿಂಗ್ ವ್ಯಾಸಂಗ ಮಾಡಿ, ವಿವಿಧ ವೃತ್ತಿಗಳನ್ನು ನಿರ್ವಹಿಸಿದ ತಮ್ಮ ಅನುಭವ ಹಂಚಿಕೊಂಡ ರಿಷಿ, ಇಂದು ಅವಕಾಶಗಳಿಗೇನು ಕೊರತೆ ಇಲ್ಲ. ಇಂಜಿನಿಯರ್, ಡಾಕ್ಟರ್ ಆಗುವುದೇ ಗುರಿಯಾಗಬೇಕಿಲ್ಲ. ಹಲವು ಕ್ಷೇತ್ರಗಳಲ್ಲಿ ಹಲವು ಅವಕಾಶಗಳಿವೆ ಎಂದು ಹೇಳಿದರು. ಯಾವುದೇ ಸಾಧನೆ ಮಾಡಲು, ನಮಗೆ ನಮ್ಮ ಮೇಲೆ ಪ್ರೀತಿ ಇರಬೇಕು, ತಪ್ಪುಗಳನ್ನು ಮಾಡಬೇಕು ಮತ್ತು ಸದಾ ಕುತೂಹಲಿಗಳಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರಮಟ್ಟದ ರೈಫಲ್ ಶೂಟರ್ ಜೀವಿತಾ ಸಚ್ಚಿದಾನಂದನ್ ಮಾತನಾಡಿ, ಯಶಸ್ಸು ಅನ್ನೋದು ಪರಿಶ್ರಮ, ಸಮರ್ಪಣೆ ಮತ್ತು ದೃಢ ಸಂಕಲ್ಪಗಳ ಫಲ ಎಂದು ಹೇಳಿದರು. ಯಾವುದೇ ಯಶಸ್ಸು ಶಾಶ್ವತವಾಗಿರುವುದಿಲ್ಲ. ಸೋಲು ಬಂದರೂ ಅದು ಕೊನೆಯಲ್ಲ. ನಿರಂತರ ಅಭ್ಯಾಸವೇ ನಿಜವಾದ ಸಾಧನೆ. ಒಂದು ದಿನ ಮಾಡಿ, ಎರಡು ದಿನ ವಿರಮಿಸಿದರೆ, ಸಾಧಕರಾಗುವುದಿಲ್ಲ. ತಪ್ಪುಗಳನ್ನು ತಿದ್ದಿಕೊಳ್ಳುವುದೇ ಯಶಸ್ಸಿನ ಕೀಲಿ ಕೈ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಪಿ ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶೇಷಾದ್ರಿಪುರಂ ಪಿಯು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಂ. ಪಾರ್ಥಸಾರಥಿ ಉಪಸ್ಥಿತರಿದ್ದರು. ಇದೇ ವೇಳೆ ನಟ ರಿಷಿ ಮತ್ತು ರೈಫಲ್ ಶೂಟರ್ ಜೀವಿತಾ ಸಚ್ಚಿದಾನಂದ ಅವರಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.







