ಜು.28: ಸ್ವಚ್ಛತಾ ಅಭಿಯಾನದ ಸಮಾಪನ ಕಾರ್ಯಕ್ರಮ
ಮಂಗಳೂರು, ಜು.26: ರಾಮಕೃಷ್ಣ ಮಿಷನ್ ಸ್ವಚ್ಛತೆಯ ನಿಟ್ಟಿನಲ್ಲಿ ಕಳೆದ ವರ್ಷದ ನವೆಂಬರ್ 3 ರಂದು ಆರಂಭಿಸಿದ 4ನೇ ಹಂತದ ಸ್ವಚ್ಛತಾ ಅಭಿಯಾನ 2018 ಜುಲೈ 28 ರಂದು ಸಂಪನ್ನಗೊಳ್ಳುತ್ತಿದೆ ಎಂದು ರಾಮಕೃಷ್ಣ ಮಿಷನ್‌ನ ಮುಖ್ಯಸ್ಥ ಸ್ವಾಮಿ ಜಿತಕಾಮಾನಂದ ತಿಳಿಸಿದ್ದಾರೆ.
ಅಂದು ಸಂಜೆ 4ಕ್ಕೆ ಆಶ್ರಮದ ಸಭಾಭವನಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಕೃಷ್ಣ ಮಠದ ಹಿರಿಯ ಯತಿ ಸ್ವಾಮಿ ದಿವ್ಯಾನಂದಜಿ ಮಹಾರಾಜ್ ವಹಿಸಲಿದ್ದಾರೆ. ಅತಿಥಿಗಳಾಗಿ ನಿಟ್ಟೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಎನ್.ವಿನಯ್ ಹೆಗ್ಡೆ, ಎಂಆರ್‌ಪಿಎಲ್ ನಿರ್ದೇಶಕ (ಹಣಕಾಸು) ಎ.ಕೆ. ಸಾಹು, ಶಾಸಕ ವೇದವ್ಯಾಸ ಕಾಮತ್, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಭಾಗವಹಿಸಲಿದ್ದಾರೆ.
‘ಸ್ವಚ್ಛ ಭಾರತ’ಕ್ಕೆ ಕೊಡುಗೆ ನೀಡಿದ ಸಾಧಕರಾದ ಚಂದ್ರಕಾಂತ ಕುಲಕರ್ಣಿ ಮತ್ತು ಭವ್ಯರಾಣಿ ಅವರನ್ನು ಈ ಸಂದರ್ಭ ಗೌರವಿಸಲಾಗುವುದು. ಅಲ್ಲದೆ ಸ್ವಚ್ಚತಾ ದರ್ಶನದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಸಭಾಕಾರ್ಯಕ್ರಮದ ನಂತರ ಸಂಜೆ 7ಕ್ಕೆ ಜಾದು ಕಲಾವಿದ ಕುದ್ರೋಳಿ ಗಣೇಶ್ ಮತ್ತು ತಂಡದವರಿಂದ ಜಾದೂ ಪ್ರದರ್ಶನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಶ್ರಮಧಾನದ ನಿರ್ವಾಹಕ ದಿಲ್‌ರಾಜ್ ಆಳ್ವ, ನಿತ್ಯಜಾಗೃತಿ ನಿರ್ವಾಹಕ ಉಮಾನಾಥ ಕೋಟೆಕಾರ್, ಸ್ವಚ್ಛ ಮನಸ್ಸು ನಿರ್ವಾಹಕ ರಂಜನ್ ಬಿ.ಯು., ಏಕದಮ್ಯಾನಂದ ಉಪಸ್ಥಿತರಿದ್ದರು.







