ವೃತ್ತಿನಿರತ ದೃಢೀಕರಣ ಪತ್ರ ಪಡೆಯಲು ಸಮಯ ನಿಗದಿಪಡಿಸಿಲ್ಲ: ವಕೀಲ ಎಚ್.ಸಿ.ಶಿವರಾಮು
ಬೆಂಗಳೂರು, ಜು.26: ವಕೀಲಿ ವೃತ್ತಿ ನಡೆಸುವುದಕ್ಕಾಗಿ ರಾಜ್ಯ ವಕೀಲರ ಪರಿಷತ್‌ನಿಂದ ವೃತ್ತಿನಿರತ ದೃಢೀಕರಣ ಪತ್ರ ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ಸಮಯ ನಿಗದಿ ಮಾಡಲಾಗಿದೆ ಎಂಬುದು ಸುಳ್ಳು ಸುದ್ದಿ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಚ್.ಸಿ.ಶಿವರಾಮು ಹೇಳಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ಸುದ್ದಿ ಹರಡಿದ್ದು, ಅರ್ಜಿ ಸಲ್ಲಿಸಲು ಸಮಯ ನಿಗದಿಪಡಿಸಲಾಗಿದೆ ಎಂದು ತಿಳಿಸಿರುವುದು ತಪ್ಪುಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತೀಯ ವಕೀಲರ ಪರಿಷತ್(ಬಿಸಿಐ) ಸದಸ್ಯ ವೈ.ಆರ್.ಸದಾಶಿವ ರೆಡ್ಡಿ, ರಾಜ್ಯ ವಕೀಲರ ಪರಿಷತ್‌ನ ನೂತನ ಸಮಿತಿ ರಚನೆ ಆದ ನಂತರ ಅರ್ಜಿ ಸಲ್ಲಿಸಬಹುದು. ಇತ್ತೀಚೆಗಷ್ಟೇ ಪರಿಷತ್ ಸದಸ್ಯರ ಚುನಾವಣೆ ಫಲಿತಾಂಶ ಬಂದಿದೆ. ಸಮಿತಿ ರಚನೆ ಆದ ನಂತರ ಅರ್ಜಿ ಪಡೆಯಲಾಗುತ್ತದೆ. ಆದಾಗ್ಯೂ ಅರ್ಜಿ ಸಲ್ಲಿಸುವುದು ಒಂದು ನಿರಂತರ ಪ್ರಕ್ರಿಯೆ ಎಂದು ತಿಳಿಸಿದರು.
ಸಮಯ ವಿಸ್ತರಣೆ ಮಾಡಲಾಗಿದೆ ಎಂದು ಇತ್ತೀಚೆಗೆ ವಾಟ್ಸ್ ಆ್ಯಪ್, ಫೇಸ್ ಬುಕ್‌ಗಳಲ್ಲಿ ಹರಿದಾಡಿದ ಸುದ್ದಿ 2014ರ ಜೂನ್ ತಿಂಗಳಿನಲ್ಲಿ ಹೊರಡಿಸಲಾಗಿದ್ದ ಸಮಯ ಮಿತಿ. ಇದನ್ನೇ ಯಾರೋ ಪುನಃ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರಬಹುದು ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ವಕೀಲರು ಪ್ರತಿಕ್ರಿಯಿಸಿದ್ದಾರೆ.





