ಸುಪ್ರೀಂ ಫೀಡ್ಸ್‌ನಲ್ಲಿ ಭಾರೀ ಅಗ್ನಿ ದುರಂತ; ಕೋಟ್ಯಾಂತರ ರೂ ನಷ್ಟ

ಬ್ರಹ್ಮಾವರ, ಜು.26: ಇಲ್ಲಿಗೆ ಸಮೀಪ ಹೇರೂರಿನಲ್ಲಿರುವ ಸುಪ್ರೀಂ ಫೀಡ್ಸ್ ಕೈಗಾರಿಕಾ ಘಟಕದ ಒಂದು ಭಾಗಕ್ಕೆ ಗುರುವಾರ ಮುಂಜಾನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗಲಿ ಕೋಟ್ಯಾಂತರ ರೂ ನಷ್ಟ ಸಂಭವಿಸಿದೆ.
ಮುಂಜಾನೆ 3 ಗಂಟೆಯ ಸುಮಾರಿಗೆ ಮೊದಲು ಸಂಗ್ರಹ ಕೊಠಡಿಯಲ್ಲಿ (ಗೋದಾಮು) ಬೆಂಕಿ ಕಾಣಿಸಿಕೊಂಡಿದ್ದು, ಮುಂದೆ ಅದು ಪ್ಯಾಕಿಂಗ್ ವಿಭಾಗಕ್ಕೂ ಹಬ್ಬಿತು. ಇದರಿಂದ ಗೋದಾಮಿನಲ್ಲಿ ಮಾರಾಟಕ್ಕೆ ಸಜ್ಜಾಗಿದ್ದ ದೀಪದೆಣ್ಣೆ, ತೆಂಗಿನೆಣ್ಣೆ ಹಾಗೂ ಸನ್‌ಪ್ಲವರ್ ಎಣ್ಣೆಯ ಸಂಗ್ರಹ ಸಂಪೂರ್ಣವಾಗಿ ಬೆಂಕಿಯಿಂದ ನಾಶವಾಗಿದೆ. ಅಲ್ಲದೇ ಪ್ಯಾಕಿಂಗ್ ವಿಭಾಗ ದಲ್ಲೂ ಇದ್ದ ಫ್ಲಾಸ್ಟಿಕ್‌ನ ಪ್ಯಾಕಿಂಗ್ ವಸ್ತುಗಳು ಸಂಪೂರ್ಣವಾಗಿ ಅಗ್ನಿಗಾಹುತಿಯಾಗಿವೆ.
ಘಟನೆ ನಡೆದ ತಕ್ಷಣ ಉಡುಪಿಯ ಎರಡು ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, 3:30ರಿಂದ ನಿರಂತರವಾಗಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡವು. ಬಳಿಕ ಕುಂದಾಪುರದಿಂದ 2, ಮಲ್ಪೆಯಿಂದ ಒಂದು ಹಾಗೂ ಮಂಗಳೂರಿನಿಂದ 17,000ಲೀ. ಸಾಮರ್ಥ್ಯದ ಬೋಜರ್ ಸೇರಿ ಆರು ಅಗ್ನಿಶಾಮಕ ದಳ ತಂಡ ಬೆಳಗ್ಗೆ 11ಗಂಟೆ ಸುಮಾರಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು. ಅಪರಾಹ್ನ 2 ಗಂಟೆ ಸುಮಾರಿಗೆ ಬೆಂಕಿಯನ್ನು ಸಂಪೂರ್ಣ ಹತೋಟಿಗೆ ತರಲಾಯಿತು ಎಂದು ಉಡುಪಿಯ ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ವಸಂತ ಕುಮಾರ್ ತಿಳಿಸಿದರು.
ಬೆಂಕಿಯ ತೀವ್ರತೆಯಿಂದ ಗೋಡನ್‌ನ ಇಡೀ ಕಟ್ಟಡವೇ ಸಂಪೂರ್ಣವಾಗಿ ಹಾನಿಗೊಂಡಿದೆ. ಅದೇ ರೀತಿ ಪ್ಯಾಕಿಂಗ್ ವಿಭಾಗ ಭಾಗಶ: ಹಾನಿಗೊಂಡಿದೆ. ಆದರೆ ಪಶು ಆಹಾರ ವಿಭಾಗಕ್ಕೆ, ಉತ್ಪಾದನಾ ವಿಭಾಗಕ್ಕೆ ಯಾವುದೇ ಹಾನಿಯಾಗಿಲ್ಲ. ಇದರಿಂದ ಮೂರು ಕೋಟಿ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿರಬಹುದು ಎಂದು ವಸಂತ ಕುಮಾರ್ ತಿಳಿಸಿದರು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಬಾಯ್ಲರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಅವರು ಹೇಳಿದರು. ಸುಪ್ರೀಂ ಫೀಡ್ಸ್‌ನಲ್ಲಿ ಕಳೆದ 20 ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಎಣ್ಣೆ ಮತ್ತು ಆಹಾರ ಧಾನ್ಯಗಳಿಂದ ತಯಾರಿಸಿದ ಉತ್ಪತ್ನಗಳನ್ನು ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಬಿಡಲಾಗುತ್ತದೆ.ಇಲ್ಲಿ ನೂರಕ್ಕೂ ಅಧಿಕ ಮಂದಿ ಉದ್ಯೋಗಿಗಳಿದ್ದರು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದೂರು ನೀಡಲಾಗಿದೆ.







