ಕಾಂಗ್ರೆಸ್ ಯಾವುದೇ ಕಾರಣಕ್ಕೂ ಪ್ರತ್ಯೇಕತಾ ಕೂಗನ್ನು ಬೆಂಬಲಿಸುವುದಿಲ್ಲ: ಈಶ್ವರ್ ಖಂಡ್ರೆ
ದಾವಣಗೆರೆ,ಜು.26: ಕಾಂಗ್ರೆಸ್ ಅಖಂಡ ಕರ್ನಾಟಕ ಅಭಿವೃದ್ಧಿ ಬಯಸಿದೆಯೇ ಹೊರತು ಯಾವುದೇ ಕಾರಣಕ್ಕೂ ಪ್ರತ್ಯೇಕತಾ ಕೂಗನ್ನು ಬೆಂಬಲಿಸುವುದಿಲ್ಲ ಎಂದು ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಗುರುವಾರ ಸಂಜೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೂ ಉತ್ತರ ಕರ್ನಾಟಕದವನೇ, ಆದರೂ ಕೂಡ ನಮ್ಮ ಪಕ್ಷ ಅಖಂಡ ಕರ್ನಾಟಕ ಅಭಿವೃದ್ಧಿ ಬಯಸಿದೆ ಎಂದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಆಗಿಲ್ಲ ಅನ್ನುವ ಕಲ್ಪನೆ ಸಾಕಷ್ಟು ಜನರಲ್ಲಿ ಈಗಲೂ ಇದೆ. ಅಂಥಹ ಭಾವನೆಗನ್ನು ನಾವು ನಿವಾರಿಸುತ್ತೇವೆ. ಉತ್ತರ ಕರ್ನಾಟಕದ ಅಭಿವೃದ್ಧಿ ಸಂಬಂಧ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಎಲ್ಲ ಯೋಜನೆಗಳನ್ನು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಂದುವರಿಸುತ್ತೇವೆ ಎಂದಿದ್ದಾರೆ. ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿ 371 ಜೆ ಅನುಷ್ಠಾನ ತಂದಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಒಟ್ಟಾರೆ 6 ಸಾವಿರ ಕೋಟಿ ಅನುದಾನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಲಾಗಿದೆ. ಡಾ.ಡಿ.ಎಂ. ನಂಜುಂಡಪ್ಪ ವರದಿ ಹಿನ್ನೆಲೆಯಲ್ಲಿ ಪ್ರತಿ ವರ್ಷ 3 ಸಾವಿರ ಕೋಟಿ ಅನುದಾನ ನೀಡಲಾಗುತ್ತಿದೆ. ಇಂಥಹ ಸಂದರ್ಭದಲ್ಲಿ ಆಗಸ್ಟ್ 2 ರಂದು ಉತ್ತರ ಕರ್ನಾಟಕ ಬಂದ್‍ಗೆ ಕರೆ ಕೊಟ್ಟ ಪ್ರತ್ಯೇಕ ಹೋರಾಟಗಾರರ ತಿಳುವಳಿಕೆಯನ್ನು ಬದಲಾಯಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಲೋಕಸಭಾ ಚುನಾವಣೆಗೆ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ಸಂಬಂಧ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ರಾಹುಲ್ ಗಾಂಧಿಯವರು ರಾಜ್ಯದಲ್ಲಿ ಪಕ್ಷವನ್ನು ಬಲಿಷ್ಟಗೊಳಿಸುವ ಕೆಲಸವನ್ನು ನೀಡಿದ್ದಾರೆ. ಅವರ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ಕಾಂಗ್ರೆಸ್ ರಾಜ್ಯದಲ್ಲಿ ಭದ್ರಕೋಟೆಯಾಗಿದೆ. ಜನರು ಪಕ್ಷವನ್ನು ಬೆಂಬಲಿಸಿದ್ದಾರೆ. ರಾಜ್ಯದ ಸಮಗ್ರ ಕ್ಷೇತ್ರಗಳ ಅಭಿವೃದ್ಧಿಗೆ ಕಳೆದ 5 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ನೀಡಿದ ಕೊಡುಗೆ ಅಪಾರ. 70 ವರ್ಷಗಳ ದೇಶದ ಇತಿಹಾಸದಲ್ಲಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಆದರೆ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ನಿರೀಕ್ಷಿಸಿದಷ್ಟು ಸ್ಥಾನ ಬರಲಿಲ್ಲ. ಕಾಂಗ್ರೆಸ್ ಮಾಡಿದ ಎಲ್ಲ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸಲು ವಿಫಲವಾಗಿದ್ದೇ ನಮ್ಮ ಪಕ್ಷ ಅಧಿಕಾರ ಕಳೆದುಕೊಳ್ಳಲು ಮುಖ್ಯಕಾರಣವಾಯಿತು ಎಂದು ಖಂಡ್ರೆ ವಿಶ್ಲೇಷಿಸಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಮಾತುಕತೆ ನಡೆಯುತ್ತಿದೆ. ಅದೇ ರೀತಿ ರಾಜ್ಯದಲ್ಲಿ ಸಧ್ಯದಲ್ಲಿಯೇ ಎದುರಾಗಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಕಾರ್ಯಕರ್ತರು, ಹಿರಿಯರು, ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಮತ್ತು ದಲ್ಲಾಳಿಗಳಿಗೆ ವಿಧಾನಸಭೆ ಪ್ರವೇಶ ನಿರ್ಬಂಧ ಹೇರಿ ಕೆಲ ನಿಯಮಗಳನ್ನು ಬದಲಾಯಿಸಲಾಗಿದೆ ಹೊರತು, ವಿಧಾನಸಭೆಗೆ ಮಾಧ್ಯಮಗಳ ಪ್ರವೇಶ ನಿರ್ಬಂಧ ಸುಳ್ಳು. ಯಾವುದೇ ಕಾರಣಕ್ಕೂ ಮಾಧ್ಯಮಗಳಿಗೆ ವಿಧಾನಸಭೆ ಪ್ರವೇಶ ನಿರ್ಬಂಧ ಮಾಡಿಲ್ಲ ಎಂದ ಅವರು, ಕೇಂದ್ರದ ಬಿಜೆಪಿ ಸರ್ಕಾರದಿಂದ ದೇಶಕ್ಕೆ ಕೆಟ್ಟ ಹೆಸರು ಬಂದಿದೆ. ಮಹಿಳೆಯರ ಮೇಲಿನ ಅತ್ಯಾಚಾರ, ಮುಗ್ಧರ ಹತ್ಯೆ, ಬಂಡವಾಳ ಶಾಹಿಗಳ ಪರವಾದ ಸರ್ಕಾರದ ಕಾರ್ಯಕ್ರಮಗಳು ಇಂಥಹ ಹಲವು ಕೃತ್ಯಗಳಿಂದ ಅನಾಗರೀಕ ದೇಶ ಎಂಬ ಪಟ್ಟ ದೇಶಕ್ಕೆ ಬಂದಿದೆ. ಇಂತಹ ಬಿಜೆಪಿ ಪಕ್ಷ ಬುಡ ಸಮೇತ ಕಿತ್ತೊಗೆಯಬೇಕು. ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಹೇಳಿದರು.