ಇಮ್ರಾನ್ ಖಾನ್: ಕ್ರಿಕೆಟ್, ರಾಜಕೀಯ ಎರಡರಲ್ಲೂ ತಮ್ಮ ತಂಡವನ್ನು ಜಯದತ್ತ ಕೊಂಡೊಯ್ದ ನಾಯಕ

ಇಸ್ಲಾಮಾಬಾದ್, ಜು.26: ನಾನೆಂದೂ ನನ್ನನ್ನು ಒಬ್ಬ ಸಾಮಾನ್ಯ ಆಟಗಾರ ಎಂದು ಪರಿಗಣಿಸಿರಲಿಲ್ಲ. ನನಗೆ ನನ್ನ ಮೇಲೆ ನಂಬಿಕೆಯಿತ್ತು. ಹೀಗೆಂದು ಹೇಳಿದವರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ರಾಜಕೀಯ ಪಕ್ಷದ ನಾಯಕ ಇಮ್ರಾನ್ ಖಾನ್. ಈ ಮಾತನ್ನು ಅವರು ಎರಡೆರಡು ಬಾರಿ ಅಕ್ಷರಶಃ ಸಾಬೀತುಪಡಿಸಿದ್ದಾರೆ, ಮೊದಲಿಗೆ ಕ್ರಿಕೆಟ್ ಮೈದಾನದಲ್ಲಿ ಮತ್ತು ನಂತರ ಇದೀಗ ರಾಜಕೀಯ ಕ್ಷೇತ್ರದಲ್ಲಿ.
ಪಾಕಿಸ್ತಾನದ ಅಷ್ಟೇನೂ ಸಮರ್ಥವಲ್ಲದ ಕ್ರಿಕೆಟ್ ತಂಡಕ್ಕೆ ಸ್ಪೂರ್ತಿ ತುಂಬಿ 1992ರಲ್ಲಿ ವಿಶ್ವಕಪ್ ಗೆಲ್ಲುವಂತೆ ಮಾಡಿದಂಥ ನಾಯಕತ್ವಗುಣವನ್ನು ಹೊಂದಿರುವ ಖಾನ್ ಇದೀಗ ತಮ್ಮ 65ರ ಹರೆಯದಲ್ಲಿ ತಾನು ಸ್ಥಾಪಿಸಿ ಬೆಳೆಸಿದ ಪಕ್ಷ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಅನ್ನು ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವಿನ ದಡ ತಲುಪಿಸಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಖಾನ್ 1996ರಲ್ಲಿ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಅಂದರೆ ನ್ಯಾಯಕ್ಕಾಗಿ ಚಳುವಳಿ ಪಕ್ಷದ ಸ್ಥಾಪನೆ ಮಾಡಿದರು. ಆದರೆ ಆ ಸಮಯದಲ್ಲಿ ಪಾಕಿಸ್ತಾನದಲ್ಲಿ ಅಧಿಪತ್ಯ ಸಾಧಿಸಿದ್ದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಝ್ ಪಕ್ಷಗಳ ಹಿಡಿತವನ್ನು ಒಡೆಯಲು ಬಹಳ ಕಷ್ಟಪಡಬೇಕಾಯಿತು. 2002ರಲ್ಲಿ ಮೊದಲ ಬಾರಿ ಸಂಸತ್‌ಗೆ ಆಯ್ಕೆಯಾದ ಖಾನ್ ನಂತರ 2013ರ ರಾಷ್ಟ್ರೀಯ ಚುನಾವಣೆಯಲ್ಲಿ ಗೆದ್ದು ಬಂದರು. ಆ ಸಮಯದಲ್ಲಿ ಪಿಟಿಐ ದೇಶದಲ್ಲಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಚುನಾವಣೆ ನಡೆದ ಒಂದು ವರ್ಷದ ನಂತರ ಆ ಚುನಾವಣೆಯಲ್ಲಿ ಮತಗಳನ್ನು ಪಿಎಂಎಲ್‌ಎನ್ ಪಕ್ಷದ ಪರವಾಗಿ ತಿರುಚಲಾಗಿದೆ ಎಂಬ ಆರೋಪವನ್ನು ಖಾನ್ ಮಾಡಿದರು. ಖಾನ್ ಹೋರಾಟದಿಂದ ಶರೀಫ್ ವಿರುದ್ಧ ತನಿಖೆ ನಡೆಸಲು ನ್ಯಾಯಾಂಗ ಸಮಿತಿಯನ್ನು ರಚಿಸಲಾಯಿತು. 2018ರ ಚುನಾವಣಾ ಅಭಿಯಾನದ ವೇಳೆ ಖಾನ್, ಭ್ರಷ್ಟಾಚಾರ ನಿಗ್ರಹಿಸುವ, ಬಡವರ ಪರ ಕಾರ್ಯಕ್ರಮಗಳನ್ನು ರೂಪಿಸುವ, ಆರೋಗ್ಯಸೇವೆ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಉತ್ತಮಗೊಳಿಸುವ ಮೂಲಕ ನಯಾ ಪಾಕಿಸ್ತಾನ್ (ಹೊಸ ಪಾಕಿಸ್ತಾನ) ನಿರ್ಮಿಸುವ ಭರವಸೆಯನ್ನು ನೀಡಿದ್ದರು.
ತಮ್ಮ ಉತ್ತಮ ದೇಹದಾರ್ಢ್ಯದ ಕಾರಣದಿಂದ ಇಮ್ರಾನ್ ಖಾನ್ ಆ ಸಮಯದಲ್ಲಿ ಪಾಕಿಸ್ತಾನದ ಯುವತಿಯರ ಮಧ್ಯೆ ಜನಪ್ರಿಯರಾಗಿದ್ದರು. ಅವರ ಮೊದಲ ಎರಡು ವಿವಾಹಗಳು ವಿಚ್ಛೇದನದಲ್ಲಿ ಅಂತ್ಯವಾಗಿದ್ದವು.
ಅವರ ಮೊದಲ ಪತ್ನಿ ಜೆಮಿಮ ಗೋಲ್ಡ್‌ಸ್ಮಿತ್ ಬ್ರಿಟಿಶ್ ಕೋಟ್ಯಧಿಪತಿಯ ಮಗಳಾಗಿದ್ದಾರೆ. ಖಾನ್, ಜೆಮಿಮರನ್ನು 1995ರಲ್ಲಿ ವಿವಾಹವಾದರು. ಒಂಬತ್ತು ವರ್ಷಗಳ ಕಾಲ ಅವರ ಜೊತೆ ದಾಂಪತ್ಯ ನಡೆಸಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ನಂತರ ಖಾನ್ 2015ರಲ್ಲಿ ಟಿವಿ ನಿರೂಪಕಿ ರೆಹಮ್ ಖಾನ್‌ರನ್ನು ವರಿಸಿದರು. ಆದರೆ ಈ ವಿವಾಹವು ಕೇವಲ ಹತ್ತು ತಿಂಗಳಷ್ಟೇ ಬಾಳಿತು. ಈ ವರ್ಷ ಖಾನ್ ತಮ್ಮ ಆಧ್ಯಾತ್ಮಿಕ ಮಾರ್ಗದರ್ಶಕಿ ಬುಶ್ರಾ ಮನೆಕರನ್ನು ವಿವಾಹವಾದರು.
ಜನನ: ಮಿಯಾವಾಲಿ, 1952
ಹೆತ್ತವರು: ಇಕ್ರಮುಲ್ಲಾ ಖಾನ್ ಮತ್ತು ಶೌಕತ್ ಖಾನುಮ್
ವಿದ್ಯಾಭ್ಯಾಸ: ತತ್ವಶಾಸ್ತ್ರ, ರಾಜಕೀಯ ಮತ್ತು ಆರ್ಥಶಾಸ್ತ್ರದಲ್ಲಿ ಪದವಿ
ಕ್ರಿಕೆಟ್ ಜೀವನದ ಸಾಧನೆ: 1992ರ ವಿಶ್ವಕಪ್ ಗೆದ್ದ ತಂಡದ ನಾಯಕ







