ಶಿರಸ್ತ್ರಾಣ ಧರಿಸಿದ್ದಕ್ಕಾಗಿ ಸಿಖ್-ಅಮೆರಿಕನ್ ಅಟರ್ನಿಯ ಜನಾಂಗೀಯ ನಿಂದನೆ
ನ್ಯೂಯಾರ್ಕ್, ಜು.26: ಅಮೆರಿಕದ ಪ್ರಥಮ ಸಿಖ್ ಅಮೆರಿಕನ್ ಅಟರ್ನಿ ಜನರಲ್ ಗುರ್ಬೀರ್ ಗ್ರೇವಾಲ್ ಅವರನ್ನು ಟರ್ಬನ್ ಮ್ಯಾನ್ (ಶಿರಸ್ತ್ರಾಣ ಧರಿಸಿದ ವ್ಯಕ್ತಿ) ಎಂದು ಸಂಬೋಧಿಸುವ ಮೂಲಕ ಇಬ್ಬರು ರೇಡಿಯೊ ನಿರೂಪಕರು ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಸಾರ್ವತ್ರಿಕವಾಗಿ ಟೀಕೆಗೆ ಗುರಿಯಾಗಿದ್ದು ರಾಜಕೀಯ ಮುಖಂಡರು ಮತ್ತು ಸಾಮಾಜಿಕ ಜಾಲತಾಣಗಳ ಬಳಕೆದಾರರಿಂದ ಆಕ್ರೋಶ ವ್ಯಕ್ತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಎನ್‌ಜೆ 101.5ಎಫ್‌ಎಂನಲ್ಲಿ ಡೆನಿಸ್ ಆ್ಯಂಡ್ ಜೂಡಿ ಶೋ ನಡೆಸಿಕೊಡುವ ಡೆನಿಸ್ ಮಲ್ಲೊಯ್ ಮತ್ತು ಜೂಡಿ ಫ್ರಾಂಕೊ ಕಾರ್ಯಕ್ರಮದುದ್ದಕ್ಕೂ ಗ್ರೇವಾಲ್ ಅವರನ್ನು ಶಿರಸ್ತ್ರಾಣ ಧರಿಸಿದ ವ್ಯಕ್ತಿ ಎಂದು ಸಂಬೋಧಿಸಿದ್ದರು ಎಂದು ಆರೋಪಿಸಲಾಗಿದೆ.
ಈ ಇಬ್ಬರು ರೆಡಿಯೊದಲ್ಲಿ ನಡೆಸಿದ ಸಂಭಾಷಣೆಯ ವೇಳೆ, ನಿನಗೆ ಆ ಅಟರ್ನಿ ಜನರಲ್ ತಿಳಿದಿದೆಯೇ? ಆತನ ಹೆಸರನ್ನು ನಾನೆಂದೂ ತಿಳಿಸಲು ಸಾಧ್ಯವಿಲ್ಲ. ನಾನು ಆತನನ್ನು ಟರ್ಬನ್ ಧರಿಸಿದರು ವ್ಯಕ್ತಿ ಎಂದೇ ಸಂಬೋಧಿಸುವುದಾಗಿ ಡೆನಿಸ್ ಹೇಳುತ್ತಾರೆ. ಆಗ ಜೂಡಿ ಕೂಡಾ ಟರ್ಬನ್ ಮ್ಯಾನ್ ಎಂದು ಪುನರುಚ್ಚರಿಸುತ್ತಾರೆ.
ನಿಮಗೆ ಹಾಗೆ ಕರೆಯುವುದ ಇಷ್ಟವಿಲ್ಲವಾದಲ್ಲಿ ಟರ್ಬನ್ ಧರಿಸುವುದನ್ನು ನಿಲ್ಲಿಸಿ. ನಾವು ನಿಮ್ಮ ಹೆಸರು ಕರೆಯುತ್ತೇವೆ ಎಂದು ಡೆನಿಸ್, ಗ್ರೇವಾಲ್ ಕುರಿತು ಮಾತನಾಡಿದ್ದಾರೆ.
ಗುರ್ಬೀರ್ ಗ್ರೇವಾಲ್‌ರನ್ನು ನೇಮಕ ಮಾಡಿರುವ ನ್ಯೂಜೆರ್ಸಿಯ ಗವರ್ನರ್ ಫಿಲ್ ಮರ್ಫಿ ಇಬ್ಬರು ರೇಡಿಯೊ ನಿರೂಪಕರ ನಡವಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ.







