ಮಂಗಳೂರು: 44 ವರ್ಷಗಳ ಬಳಿಕ ಶ್ರೀಗಂಧ ಕಳ್ಳತನದ ಆರೋಪಿ ಸೆರೆ !

ಮಂಗಳೂರು, ಜು. 26: ಶ್ರೀಗಂಧ ಕಳ್ಳತನ ಪ್ರಕರಣದಲ್ಲಿ ಕಳೆದ 44 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಅಬ್ಬಾಸ್ ಎಂದು ಗುರುತಿಸಲಾಗಿದೆ.
1974ರ ಜು.15ರಂದು ತನ್ನ ಬೈಕ್‌ನಲ್ಲಿ 7 ಕೆಜಿ ಶ್ರೀಗಂಧ ಸಾಗಿಸುತ್ತಿದ್ದ ವೇಳೆ ಬುಲ್ಲೇರಿ ಕಟ್ಟೆ ಫುಡ್ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್‌ಕಾನ್ಸ್‌ಟೇಬಲ್ ಗಂಗೋಜಿ ರಾವ್ ಬೈಕ್ ತಪಾಸಣೆ ಮಾಡಿದಾಗ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳೆದ ನಾಲ್ಕು ತಿಂಗಳಿಂದ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಹೆಡ್ ಕಾನ್ಸ್‌ಟೇಬಲ್ ಪರಮೇಶ್ವರ್ ಬುಧವಾರ ಆರೋಪಿಯನ್ನು ಕೇರಳದ ಕಾಸರಗೋಡು ಜಿಲ್ಲೆಯ ಚಂಗಲ ಗ್ರಾಮದ ಬಳಿಯ ಪಾನ್ಲದ ಕುಣ್ಣಿಲ್ಲ ಎಂಬಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಬ್ಬಾಸ್ ಜಾಮೀನಿನ ಮೇಲೆ ಗುರುವಾರ ಬಿಡುಗಡೆಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





