ಪೊಲೀಸರ ಗಸ್ತು ವಾಹನವನ್ನೇ ಅಡ್ಡಗಟ್ಟಿದ ದರೋಡೆಕೋರರು: ಓರ್ವನ ಬಂಧನ
![ಪೊಲೀಸರ ಗಸ್ತು ವಾಹನವನ್ನೇ ಅಡ್ಡಗಟ್ಟಿದ ದರೋಡೆಕೋರರು: ಓರ್ವನ ಬಂಧನ ಪೊಲೀಸರ ಗಸ್ತು ವಾಹನವನ್ನೇ ಅಡ್ಡಗಟ್ಟಿದ ದರೋಡೆಕೋರರು: ಓರ್ವನ ಬಂಧನ](https://www.varthabharati.in/sites/default/files/images/articles/2018/07/26/144927.jpg)
ದಾವಣಗೆರೆ,ಜು.26: ಪೊಲೀಸರ ಗಸ್ತು ವಾಹನವನ್ನೇ ಅಡ್ಡಗಟ್ಟಿ ದರೋಡೆಗೆ ಮುಂದಾಗಿದ್ದ 9 ಮಂದಿ ಹೆದ್ದಾರಿ ದರೋಡೆಕೋರರ ತಂಡದ ಓರ್ವ ಸದಸ್ಯನನ್ನು ಚನ್ನಗಿರಿ ಪೊಲೀಸರು ಬಂಧಿಸಿದ ಘಟನೆ ತಾ. ಬೆಂಕಿಕೆರೆ ಗ್ರಾಮದ ಬಳಿ ಚಿತ್ರ ದುರ್ಗ-ಶಿವಮೊಗ್ಗ ಹೆದ್ದಾರಿಯಲ್ಲಿ ನಡೆದಿದೆ.
ದರೋಡೆಕೋರರಿಂದ ಮಚ್ಚು, ಕಾರದ ಪುಡಿ, ಟಾರ್ಚ್ ಸೇರಿದಂತೆ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.
ಚನ್ನಗಿರಿ ತಾಲೂಕನ್ನು ಹಾದು ಹೋಗಿರುವ ಚಿತ್ರದುರ್ಗ-ಶಿವಮೊಗ್ಗ ಹೆದ್ದಾರಿಯಲ್ಲಿ ದರೋಡೆಕೋರರ ತಂಡ ಆ ಮಾರ್ಗದಲ್ಲಿ ಸಾಗುವ ವಾಹನಗಳ ದರೋಡೆಗೆ ಮುಂದಾದ ಬಗ್ಗೆ ದೊರೆತ ಖಚಿತ ಮಾಹಿತಿ ಆದರಿಸಿ ಸಬ್ ಇನ್ಸಪೆಕ್ಟರ್ ವೀರಬಸಪ್ಪ ಕುಸಲಾಪುರ ಹಾಗೂ ಸಿಬ್ಬಂದಿ ಕಾರ್ಯಾಚರಣೆಗಿಳಿದ ಪರಿಣಾಮ ದರೋಡೆಕೋರರ ತಂಡದ ಓರ್ವ ಸೆರೆಯಾಗಿದ್ದಾನೆ.
ಹೆದ್ದಾರಿ ದರೋಡೆ ಮುಂದಾಗಿದ್ದ ದರೋಡೆಕೋರರ ತಂಡದ ಬಂಧಿತ ಸದಸ್ಯ ಚನ್ನಗಿರಿ ತಾಲೂಕಿನ ಹೆಬ್ಬಳಗೆರೆ ಗ್ರಾಮದ ಯತೀಶ್(28 ವರ್ಷ) ಎಂಬುದಾಗಿ ಗುರುತಿಸಿದ್ದು, ತಲೆ ಮರೆಸಿಕೊಂಡ ಇತರೆ 8 ಮಂದಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಉಳಿದ ಆರೋಪಿಗಳೂ ಹೆಬ್ಬಳಗೆರೆ, ಚಿಕ್ಕ ಹೆಬ್ಬಳಗೆರೆ ಗ್ರಾಮದವರು ಎನ್ನಲಾಗಿದೆ.
ಕಳೆದ ಸೋಮವಾರ ರಾತ್ರಿ 2 ಗಂಟೆ ವೇಳೆ ಬೆಂಕಿಕೆರೆ ಬಳಿ ಹೆದ್ದಾರಿ ದರೋಡೆಕೋರರ ತಂಡ ಸಕ್ರಿಯವಾಗಿರುವ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ದೊರೆತಿದೆ. ಗಸ್ತಿನಲ್ಲಿದ್ದ ಎಸ್‍ಐ ವೀರಬಸಪ್ಪ ಹಾಗೂ ಸಿಬ್ಬಂದಿ ತಕ್ಷಣವೇ ಕಾರ್ಯೋನ್ಮುಖವಾಗಿದ್ದಾರೆ. ದರೋಡೆಕೋರರ ತಂಡವನ್ನು ಸೆರೆ ಹಿಡಿಯಲು ಬೆಂಕಿ ಕೆರೆ ಗ್ರಾಮದ ಬಳಿ ಹೋದಾಗ ಯಾವುದೋ ಅಪರಿಚಿತ ವಾಹನವೆಂದು ದರೋಡೆಕೋರರು ಪೊಲೀಸ್ ವಾಹನವನ್ನೇ ಅಡ್ಡಗಟ್ಟಿ ಬೇಸ್ತು ಬಿದ್ದಿದ್ದಾರೆ.
ಪೊಲೀಸ ವಾಹನವೆಂಬ ಅರಿವಿಲ್ಲದ ದರೋಡೆಕೋರರು ಪೊಲೀಸ್ ಜೀಪನ್ನೇ ಅಡ್ಡಗಟ್ಟಿ, ದರೋಡೆಗೆ ಮುಂದಾಗಿದ್ದಾರೆ.
ವಾಹನ ಪೊಲೀಸರದ್ದು ಎಂದು ಗೊತ್ತಾಗುತ್ತಲೇ 9 ದರೋಡೆಕೋರರಲ್ಲಿ 8 ಮಂದಿ ಪರಾರಿಯಾಗಿದ್ದು, ಯತೀಶನನ್ನು ಗಸ್ತು ಪೊಲೀಸರು ಬಂಧಿಸಿದ್ದಾರೆ. ದರೋಡೆಕೋರರ ತಂಡದ ಬಳಿ ಇದ್ದ ಮಚ್ಚು, ಕಾರದ ಪುಡಿ ಪಾಕೆಟ್ ಇತರೆ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿ ಹೆಬ್ಬಳಗೆರೆ ಯತೀಶನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ವೀರಬಸಪ್ಪ ಕುಸುಲಾಪುರ ನೇತೃತ್ವದಲ್ಲಿ ಸಿಬ್ಬಂದಿಯಾದ ರುದ್ರೇಶ, ರವಿ ದಾದಾಪುರ, ರುದ್ರೇಶ, ಹನುಮಂತ ಕವಾದಿ, ಜೀಪು ಚಾಲಕ ರವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡ ಆರೋಪಿಗಳಿಗಾಗಿ ಬಲೆ ಬೀಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.