ಯುಎಸ್ ವೈಮಾನಿಕ ಸಂಸ್ಥೆಗಳು ತೈವಾನ್ ಅನ್ನು ಚೀನಾದ ಭಾಗವೆಂದು ಗುರುತಿಸಬೇಕು: ಚೀನಾ
ಶಾಂಘೈ, ಜು.26: 44 ವೈಮಾನಿಕ ಸಂಸ್ಥೆಗಳ ಪೈಕಿ 40 ಸಂಸ್ಥೆಗಳು ತಮ್ಮ ಜಾಲತಾಣಗಳಲ್ಲಿ ಹಾಂಕಾಂಗ್, ಮಕಾವ್ ಮತ್ತು ತೈವಾನ್‌ಬಗೆಗಿನ ಮಾಹಿತಿಯಲ್ಲಿ ತಿದ್ದುಪಡಿ ಮಾಡಿವೆ ಎಂದು ತಿಳಿಸಿರುವ ಚೀನಾದ ನಾಗರಿಕ ವಾಯುವಾಯನ ನಿಯಂತ್ರಣ ಮಂಡಳಿ, ಆದರೂ ಈ ಕ್ರಮಗಳು ಅಪೂರ್ಣವಾಗಿವೆ ಎಂದು ತಿಳಿಸಿದೆ.
ವಿದೇಶಿ ಸಂಸ್ಥೆಗಳು, ಮುಖ್ಯವಾಗಿ ವೈಮಾನಿಕ ಸಂಸ್ಥೆಗಳು, ತಮ್ಮ ಜಾಲತಾಣಗಳಲ್ಲಿ ತೈವಾನ್‌ನನ್ನು ಚೀನಾದ ಆಳ್ವಿಕೆಯ ಭಾಗವಲ್ಲ ಎಂದು ಹೇಳುವ ಹಾಗಿಲ್ಲ ಎಂದು ಚೀನಾ ತಿಳಿಸಿದೆ.
ತೈವಾನ್ ಚೀನಾದ ಅತ್ಯಂತ ಸೂಕ್ಷ್ಮ ವಿವಾದಿತ ಪ್ರದೇಶವಾಗಿದ್ದು ಚೀನಾ ಅದನ್ನು ತನ್ನದೇ ಭಾಗವೆಂದು ಪರಿಗಣಿಸಿದೆ. ತೈವಾನ್‌ಅನ್ನು ತನ್ನ ನಿಯಂತ್ರಣಕ್ಕೆ ತರಲು ಚೀನಾವು ಸೇನೆಯನ್ನು ಬಳಸುವ ಸಾಧ್ಯತೆಯನ್ನೂ ತಳ್ಳಿಹಾಕಿಲ್ಲ. ಹಾಂಕಾಂಗ್ ಈ ಹಿಂದೆ ಬ್ರಿಟಿಶ್ ಕಾಲನಿಯಾಗಿದ್ದು 1997ರಲ್ಲಿ ವಿಸ್ತೃತ ಸ್ವಾಯತ್ತತೆಯ ಮೂಲಕ ಚೀನಾಗೆ ಹಸ್ತಾಂತರಿಸಲಾಯಿತು. ಇನ್ನು ಮಕಾವ್ ಪೋರ್ಚುಗೀಸರ ಅಧೀನದಲ್ಲಿದ್ದು 1999ರಲ್ಲಿ ಚೀನಾಗೆ ವಾಪಸ್ ನೀಡಲಾಯಿತು. ಅಮೆರಿಕನ್ ಏರ್‌ಲೈನ್ಸ್ ಗ್ರೂಪ್ ಇಂಕ್, ಡೆಲ್ಟ ಏರ್ ಲೈನ್ಸ್, ಯುನೈಟೆಡ್ ಏರ್‌ಲೈನ್ಸ್ ಮತ್ತು ಹವಾಯಿಯನ್ ಏರ್‌ಲೈನ್ಸ್ ಹೀಗೆ ನಾಲ್ಕು ವೈಮಾನಿಕ ಸಂಸ್ಥೆಗಳು ಸರಿಪಡಿಸಲಾದ ವರದಿಯನ್ನು ಸಲ್ಲಿಸಿವೆ ಎಂದು ಚೀನಾದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.





