ಭಾರತದ ನಾಕೌಟ್ ಪ್ರವೇಶಕ್ಕೆ ಐರ್ಲೆಂಡ್ ಅಡ್ಡಿ

ಲಂಡನ್, ಜು.26: ಮಹಿಳೆಯರ ಹಾಕಿ ವಿಶ್ವಕಪ್‌ನ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತಕ್ಕೆ 1-0 ಅಂತರದಲ್ಲಿ ಸೋಲುಣಿಸಿರುವ ಐರ್ಲೆಂಡ್ ಸತತ ಗೆಲುವಿನೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ 1-1 ಗೋಲುಗಳಿಂದ ಡ್ರಾ ಮಾಡಿಕೊಂಡಿದ್ದ ಭಾರತಕ್ಕೆ ಇದೀಗ ವಿಶ್ವಕಪ್‌ನಲ್ಲಿ ನಾಕೌಟ್ ಹಂತ ಪ್ರವೇಶಿಸುವ ಕನಸು ಬಹುತೇಕ ದೂರವಾಗಿದೆ.
ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ 3-1 ಅಂತರದಲ್ಲಿ ಗೆಲುವು ದಾಖಲಿಸಿದ್ದ ಐರ್ಲೆಂಡ್ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇಂದು ನಡೆದ ಪಂದ್ಯದ 13ನೇ ನಿಮಿಷದಲ್ಲಿ ಅನ್ನಾ ಫ್ಲನಗನ್ ಗೋಲು ಗಳಿಸುವ ಮೂಲಕ ಖಾತೆ ತೆರೆದಿದ್ದರು. ಇದು ಐರ್ಲೆಂಡ್‌ನ ಗೆಲುವಿಗೆ ನೆರವಾಗಿದೆ.
54ನೇ ನಿಮಿಷದಲ್ಲಿ ಭಾರತಕ್ಕೆ ಗೋಲು ಗಳಿಸುವ ಅವಕಾಶ ಸಿಕ್ಕಿದರೂ ಗೋಲು ಬರಲಿಲ್ಲ. ಒಂದು ವೇಳೆ ದಾಖಲಾಗಿದ್ದರೆ 1-1 ಸಮಬಲ ಸಾಧಿಸುವ ಸಾಧ್ಯತೆ ಇತ್ತು. ಭಾರತಕ್ಕೆ 7 ಬಾರಿ ಪೆನಾಲ್ಟಿ ಅವಕಾಶ ಒದಗಿ ಬಂದಿದ್ದರೂ ಗೋಲು ಗಳಿಸುವ ಪ್ರಯತ್ನ ಫಲಕಾರಿಯಾಗಲಿಲ್ಲ.
ಭಾರತ ತನ್ನ ಕೊನೆಯ ಪಂದ್ಯದಲ್ಲಿ ಜು. 29ರಂದು ಅಮೆರಿಕವನ್ನು ಎದುರಿಸಲಿದೆ.





