ಮಡಿಕೇರಿ: ಸೋಮವಾರಪೇಟೆ ತಾಲೂಕು 6 ನೇ ಕನ್ನಡ ಸಾಹಿತ್ಯ ಸಮ್ಮೇಳನ

ಮಡಿಕೇರಿ ಜು.26: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಶ್ರೀಮಂತವಾಗಿದ್ದು, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಅಗತ್ಯ ಎಂದು ಸೋಮವಾರಪೇಟೆ ತಾಲೂಕು 6 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಜಲಾ ಕಾಳಪ್ಪ ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ಗುರುವಾರ ನಡೆದ ಸೋಮವಾರಪೇಟೆ ತಾಲೂಕು 6 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಭಾಷೆ ಬೆಳವಣಿಗೆಗೆ ಶರಣರು, ಸಾಹಿತಿಗಳು, ಕವಿಗಳು ಅಪಾರ ಕೊಡುಗೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ತಾಯಿ ಭಾಷೆಯಾದ ಕನ್ನಡ ಭಾಷೆಯನ್ನು ಪ್ರಥಮ ಆದ್ಯತೆಯಲ್ಲಿ ಕಲಿಯಬೇಕು. ಉಳಿದಂತೆ ಇತರೆ ಭಾಷೆಗಳನ್ನು ಗೌರವಿಸಬೇಕು ಎಂದು ಸಮ್ಮೇಳನಾಧ್ಯಕ್ಷರು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಓದಿದ ಹಲವು ಮಹನೀಯರು ದೊಡ್ಡ ವಿಜ್ಞಾನಿಗಳಾಗಿ, ಕವಿಗಳಾಗಿ, ಜನಪ್ರತಿನಿಧಿಗಳಾಗಿ, ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಹಾಗೆಯೇ ಇಂಗ್ಲೀಷ್ ಮಾಧ್ಯಮ ಶಾಲೆಗೆ ಅನುಮತಿ ನೀಡುವುದರಿಂದ ಕನ್ನಡ ಶಾಲೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ ಎಂದು ಜಲಾಕಾಳಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಹೀಗೆ ಹಲವು ಸೌಲಭ್ಯಗಳನ್ನುಉಚಿತವಾಗಿ ನೀಡುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆದು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಎಂದು ಅವರು ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಪತ್ರಗಳು ಇಂಗ್ಲೀಷ್ ಭಾಷೆಯಲ್ಲಿ ಹೆಚ್ಚಾಗಿರುತ್ತದೆ. ಇದು ಸರಿಯಲ್ಲ. ನಾಡಿನ ಭಾಷೆಯನ್ನು ಉಳಿಸಬೇಕು. ಭಾಷೆ ಎಲ್ಲರಿಗೂ ಅರ್ಥವಾಗುವಂತೆ ಇರಬೇಕು ಎಂದರು. ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ದೂಡುವವರ ಸಂಖ್ಯೆ ಹೆಚ್ಚಾಗಿದೆ. ಕನ್ನಡ ಭಾಷೆಯ ಜೊತೆಗೆ ಇಂಗ್ಲೀಷ್ ಭಾಷೆಯನ್ನು ಕಲಿಯಲಿ. ಅದನ್ನು ಬಿಟ್ಟು ಸಂಪೂರ್ಣ ಇಂಗ್ಲೀಷ್ ಮಾಧ್ಯಮಕ್ಕೆ ವಾಲುವುದು ಸರಿಯೇ ಎಂದು ಅವರು ಪ್ರಶ್ನಿಸಿದರು.
ಒಂದರಿಂದ 10 ನೇ ತರಗತಿ ವರೆಗೆ ಕನ್ನಡ ಭಾಷೆ ಕಲಿಕೆ ಕಡ್ಡಾಯವಾಗಿರಬೇಕು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಶೇ.50ರಷ್ಟು ಮೀಸಲಾತಿ ನೀಡಬೇಕು. ಎಲ್ಲರೂ ಕೈಕಟ್ಟಿ ಕುಳಿತರೆ ಕನ್ನಡದ ಭವಿಷ್ಯದ ಬಾಗಿಲು ಮುಚ್ಚಿಹೋದಿತು ಎಂದು ಸಮ್ಮೇಳನಾಧ್ಯಕ್ಷರು ಆತಂಕ ವ್ಯಕ್ತಪಡಿಸಿದರು. ಕನ್ನಡ ಭಾಷಾ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಹಳ್ಳಿಗಾಡಿನ ಎಷ್ಟೋ ಮಹಿಳೆಯರು ಎಲೆ ಮರೆಯ ಕಾಯಿಯಂತೆ ಸಾಹಿತ್ಯ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಕೊಡಗು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಹಲವರು ಕನ್ನಡ ಭಾಷಾ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಕನ್ನಡ ಭಾಷೆ ಕಲಿಸಬೇಕು ಎಂದು ಅವರು ಹೇಳಿದರು.
ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ಅವರು ಮಾತನಾಡಿ ಪ್ರತಿಯೊಬ್ಬರು ಕನಸು ಕಾಣುವುದರ ಜೊತೆಗೆ ನನಸು ಮಾಡುವತ್ತ ಗಮನಹರಿಸಬೇಕು. ಹಾಗೆಯೇ ಕನ್ನಡ ಮಾಧ್ಯಮದಲ್ಲಿಯೇ ಓದಿ ಮಹತ್ತರ ಸಾಧನೆ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಇತಿಹಾಸವನ್ನು ಅಧ್ಯಯನ ಮಾಡಬೇಕು. ಕನ್ನಡ ಭಾಷೆಯನ್ನು ಶರಣರು ಅತೀ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ವಚನ ಸಾಹಿತ್ಯದಲ್ಲಿ ಸಾಮಾಜಿಕ ಹಿನ್ನೆಲೆಯನ್ನು ಕಾಣಬಹುದು. ಆ ನಿಟ್ಟಿನಲ್ಲಿ ಕನ್ನಡ ಹೃದಯದ ಭಾಷೆಯಾಗಿದೆ ಎಂದು ನುಡಿದರು. ಜಾಗತಿಕ ಭಾಷೆಯನ್ನು ಕಲಿಯಬೇಕು. ಆದರೆ ಮಾತೃ ಭಾಷೆಯನ್ನು ಮರೆಯಬಾರದು ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಿವೃತ್ತ ಮಾಹಿತಿ ಆಯುಕ್ತರಾದ ವಿರೂಪಾಕ್ಷಯ್ಯ, ಅನಾದಿ ಕಾಲದಿಂದಲೂ ಕನ್ನಡ ಭಾಷೆಗೆ ಇತರೆ ಭಾಷೆಗಳು ದಾಳಿ ನಡೆಸುತ್ತವೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಆ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಕನ್ನಡ ಭಾಷೆ, ಸಂಸ್ಕೃತಿ, ಕಲೆ ಬಗ್ಗೆ ಅಭಿಮಾನವಿರಬೇಕು ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ, ಲೋಕೇಶ್ ಸಾಗರ್ ಅವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡು ಬರಲಾಗುತ್ತದೆ. 2 ಜಿಲ್ಲಾ ಮಟ್ಟದ, 5 ತಾಲೂಕು ಮಟ್ಟದ ಹಾಗೂ 2 ಕೃಷಿ ಸಾಹಿತ್ಯ ಸಮ್ಮೇಳನ ಹಾಗೂ 2 ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆಲೂರು ಸಿದ್ದಾಪುರ ಗ್ರಾಮದ ಹಿರಿಯರಾದ ಸಿದ್ದಮಲ್ಲಯ್ಯ ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸರೋಜಮ್ಮ, ಜಿ.ಪಂ.ಸದಸ್ಯರಾದ ಕುಮುದ ಧರ್ಮಪ್ಪ, ವಿರಾಜಪೇಟೆ ತಾ. ಪರಿಷತ್ತು ಅಧ್ಯಕ್ಷರಾದ ಮಧೂಶ್ ಪೂವಯ್ಯ, ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷರಾದ ಎಸ್.ಜಿ.ವಿಜೇತ್ ಅವರು ಸ್ವಾಗತಿಸಿದರು. ಜಾನ್ಸಿ ಮತ್ತು ತಂಡದವರು ನಾಡಗೀತೆ ಹಾಡಿದರು. ಎಚ್.ಆರ್.ಶೇಖರ್ ಮತ್ತು ತಂಡದವರು ರೈತಗೀತೆ ಹಾಡಿದರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಆಲೂರು ಸಿದ್ದಾಪುರದ ಮಾಲಂಬಿ ಮುಖ್ಯರಸ್ತೆ ಮೂಲಕ ಪ್ರಧಾನ ವೇದಿಕೆಗೆ ಮೆರವಣಿಗೆ ತಲುಪಿತು. ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಮಂಗಳವಾದ್ಯ, ಪೂರ್ಣಕುಂಭ, ವೈವಿದ್ಯಮಯ ಕಲಾತಂಡಗಳು, ಸ್ತ್ರೀಶಕ್ತಿ ಸಂಘ, ಶ್ರೀ ಧರ್ಮಸ್ಥಳ ಸಂಘ, ಕನ್ನಡ ಪರ ಸಂಘಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಆಟೋ ಚಾಲಕರು, ವಿವಿಧ ಸಂಘ ಸಂಸ್ಥೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.







