ಪಾಕ್ ಚುನಾವಣೆಗಳಲ್ಲಿ ಅಕ್ರಮಗಳು ನಡೆದಿದ್ದವು, ಇಮ್ರಾನ್‌ಗೆ ಸೇನೆಯ ಬೆಂಬಲವಿದೆ:ಕೇಂದ್ರ ಸಚಿವ ಆರ್.ಕೆ.ಸಿಂಗ್

ಹೊಸದಿಲ್ಲಿ,ಜು.27: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗಳಲ್ಲಿ ಅಕ್ರಮಗಳು ನಡೆದಿದ್ದವು ಮತ್ತು ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್(ಪಿಟಿಐ)ನ ಮುಖ್ಯಸ್ಥ ಇಮ್ರಾನ್ ಖಾನ್ ಅವರು ಪ್ರಧಾನಿಯಾದರೆ ಭಾರತದತ್ತ ಆ ರಾಷ್ಟ್ರದ ದ್ವೇಷ ನೀತಿಯು ಬದಲಾಗುವ ಸಾಧ್ಯತೆಗಳಿಲ್ಲ ಎಂದು ಕೇಂದ್ರ ಸಚಿವ ಆರ್.ಕೆ.ಸಿಂಗ್ ಅವರು ಶುಕ್ರವಾರ ಇಲ್ಲಿ ಹೇಳಿದರು. ಇದು ಪಾಕ್ ಚುನಾವಣಾ ಫಲಿತಾಂಶದ ಕುರಿತು ಹೊರಬಿದ್ದಿರುವ ಪ್ರಥಮ ಅಧಿಕೃತ ಪ್ರತಿಕ್ರಿಯೆಯಾಗಿದೆ.
ಖಾನ್ ಅವರು ಸೇನೆಯ ಬೆಂಬಲವನ್ನು ಹೊಂದಿದ್ದಾರೆ ಮತ್ತು ಅವರು ಭಾರತಕ್ಕೆ ಸಂಬಂಧಿಸಿದ ವಿಷಯಗಳು ಸೇರಿದಂತೆ ಸೇನೆಯ ನೀತಿಗಳನ್ನು ಅನುಸರಿಸುವ ಸಾಧ್ಯತೆಗಳಿವೆ ಎಂದು ಸಿಂಗ್ ಹೇಳಿದರು.
ಪಾಕ್ ಚುನಾವಣಾ ಫಲಿತಾಂಶ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈವರೆಗೆ ಯಾವುದೇ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿಲ್ಲ. ಸೇನೆಯು ಆರಂಭದಿಂದಲೂ ಖಾನ್ ಅವರನ್ನು ಬೆಂಬಲಿಸುತ್ತಿದೆ. ಅವರು ಸದಾ ಸೇನೆಯ ಅಭ್ಯರ್ಥಿಯಾಗಿದ್ದರು ಎಂದ ಸಿಂಗ್,ಪಾಕಿಸ್ತಾನದ ಚುನಾವಣೆಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಅಲ್ಲಿಯ ರಾಜಕೀಯ ಪಕ್ಷಗಳು ಮತ್ತು ವೀಕ್ಷಕರು ಆರೋಪಿಸಿದ್ದಾರೆ ಎಂದರು.
ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಪದಚ್ಯುತಿ ಮತ್ತು ಚುನಾವಣೆಗಳಿಗೆ ಕೆಲವೇ ದಿನಗಳ ಮೊದಲು ಅವರನ್ನು ಮತ್ತು ಅವರ ಪುತ್ರಿಯನ್ನು ಜೈಲಿಗೆ ತಳ್ಳಿರುವುದರ ಹಿಂದೆ ಸೇನೆಯ ಕೈವಾಡವಿತ್ತು ಎಂದ ಸಿಂಗ್,ಭಾರತದ ಕುರಿತು ಪಾಕಿಸ್ತಾನದ ನೀತಿಯಲ್ಲಿ ಯಾವುದೇ ಬದಲಾವಣೆಯಾಗುತ್ತದೆ ಎಂದು ತಾನು ಭಾವಿಸಿಲ್ಲ. ಗಡಿಯಾಚೆಯ ಭಯೋತ್ಪಾದನೆ ಮುಂದುವರಿಯಲಿದೆ. ಇಂತಹ ನೀತಿಗಳ ಬಗ್ಗೆ ಪಾಕ್ ಸೇನೆಯು ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದರು.
ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರು ತನ್ನ ಪಿಟಿಐ ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿರುವ ಜೊತೆಗೆ ಪಾಕ್ ಪ್ರಧಾನಿಯಾಗಲು ಸಜ್ಜಾಗಿದ್ದಾರೆ,ಆದರೆ ಅವರಿಗೆ ಬಹುಮತದ ಕೊರತೆಯಿದೆ.
ಪಾಕಿಸ್ತಾನವು ಭಾರತದೊಂದಿಗಿನ ತನ್ನ ಸಂಬಂಧವನ್ನು ಉತ್ತಮಗೊಳಿಸಿಕೊಳ್ಳಲು ಸಿದ್ಧವಿದೆ ಮತ್ತು ಕಾಶ್ಮೀರ ಬಿಕ್ಕಟ್ಟು ಸೇರಿದಂತೆ ಎಲ್ಲ ವಿವಾದಗಳನ್ನು ನಾಯಕರು ಬಗೆಹರಿಸಬೇಕು ಎಂದು ತನ್ನ ಸರಕಾರವು ಬಯಸಲಿದೆ ಎಂದು ಖಾನ್ ಗುರುವಾರ ಇಸ್ಲಾಮಾಬಾದ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಕಳೆದ ಕೆಲವು ವರ್ಷಗಳಲ್ಲಿ ಗಡಿಯಾಚೆಯ ಭಯೋತ್ಪಾದನೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವು ಹಳಸಿದೆ. ಭಾರತದ ಹಲವಾರು ಸೇನಾನೆಲೆಗಳ ಮೇಲೆ ಪಾಕಿಸ್ತಾನ ಮೂಲದ ಗುಂಪುಗಳ ಭಯೋತ್ಪಾದಕ ದಾಳಿಗಳ ಬಳಿಕ ಸಂಬಂಧಗಳು ಇನ್ನಷ್ಟು ಹದಗೆಟ್ಟಿವೆ.
ಬಾಕಿಯಿರುವ ವಿವಾದಗಳನ್ನು ಬಗೆಹರಿಸಲು ಉಭಯ ರಾಷ್ಟ್ರಗಳ ನಡುವೆ ಯಾವುದೇ ಅರ್ಥಪೂರ್ಣ ಮಾತುಕತೆಗಳು ನಡೆಯುವಂತಾಗಲು ಪಾಕಿಸ್ತಾನವು ತನ್ನ ನೆಲದಿಂದ ಭಯೋತ್ಪಾದಕ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಭಾರತವು ಪ್ರತಿಪಾದಿಸುತ್ತಿದೆ.







