ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮಡಿಕೇರಿಯಲ್ಲಿ ಎಸ್.ಐ.ಟಿ ತನಿಖೆ ಚುರುಕು

ಮಡಿಕೇರಿ, ಜು.27: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಸರಕಾರಿ ನೌಕರ ರಾಜೇಶ್ ಡಿ.ಬಂಗೇರ ಇತ್ತೀಚೆಗೆ ಬಂಧಿಯಾದ ಬಳಿಕ ವಿಶೇಷ ತನಿಖಾದಳ ಮಡಿಕೇರಿಯಲ್ಲಿ ತನಿಖೆಯನ್ನು ಬಿರುಸುಗೊಳಿಸಿದೆ.
ಇತ್ತೀಚೆಗೆ ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ರಾಜೇಶ್ ಡಿ.ಬಂಗೇರ ನೀಡಿರುವ ಕೆಲವು ಸುಳಿವುಗಳನ್ನು ಆಧರಿಸಿ ತನಿಖಾ ಅಧಿಕಾರಿಗಳು ನಗರದ ಮುಖ್ಯ ಬೀದಿಯಲ್ಲಿರುವ ಬಂದೂಕು ಮಳಿಗೆಯೊಂದಕ್ಕೆ ತೆರಳಿ ಕೆಲವು ದಾಖಲೆಗಳನ್ನು ಪರಿಶೀಲಿಸಿರುವ ಬಗ್ಗೆ ಮಾಹಿತಿ ಇದೆ.
ನಾಟಿ ವೈದ್ಯ ಮೋಹನ್ ನಾಯಕ್‍ನ ಹೇಳಿಕೆ ಆಧರಿಸಿ ಬಂಧಿತನಾದ ರಾಜೇಶ್ ಡಿ.ಬಂಗೇರ ಈ ಬಂದೂಕು ಮಳಿಗೆಯಲ್ಲಿ ಬಂದೂಕು ಮತ್ತು ಅದರ ಮದ್ದು ಗುಂಡುಗಳನ್ನು ಖರೀದಿಸಿರುವ ಕುರಿತು ಪ್ರಾಥಮಿಕ ತನಿಖೆ ನಡೆಸಲಾಗುತ್ತಿದೆ. ರಾಜೇಶ್ ಅವರ ಕೆಲವು ಆಪ್ತ ವರ್ಗದವರನ್ನು ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ. ಒಟ್ಟು 3 ತಂಡಗಳಾಗಿ ಕೊಡಗಿನೆಲ್ಲೆಡೆ ತನಿಖೆ ನಡೆಸುತ್ತಿರುವ ಎಸ್.ಐ.ಟಿ ತಂಡ ಪ್ರಕರಣದ ಕುರಿತು ಗೌಪತ್ಯೆ ಕಾಯ್ದುಕೊಂಡಿದ್ದು, ಯಾವುದೇ ಮಾಹಿತಿ ಬಹಿರಂಗ ಪಡಿಸುತ್ತಿಲ್ಲ.
ರಾಜೇಶ್ ಡಿ.ಬಂಗೇರ ನೀಡಿರುವ ಮಾಹಿತಿ ಆಧರಿಸಿ ಎಸ್.ಐ.ಟಿ ಅಧಿಕಾರಿಗಳು ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಲ್ಲದೆ ಎಸ್.ಐ.ಟಿ ಯ ಒಂದು ತಂಡ ರಾಜೇಶ್ ಡಿ.ಬಂಗೇರನ ನಿವಾಸವಿರುವ ನಾಪೋಕ್ಲುವಿನ ಪಾಲೂರು ಗ್ರಾಮಕ್ಕೆ ತೆರಳಿ ರಾಜೇಶ್ ಕುಟುಂಬ ವರ್ಗವನ್ನು ವಿಚಾರಣೆ ನಡೆಸಿ ಕೆಲವು ಮಾಹಿತಿ ಪಡೆದಿರುವುದಾಗಿ ತಿಳಿದು ಬಂದಿದೆ.
ಎಸ್‍ಐಟಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಲು ಜಿಲ್ಲಾ ಗುಪ್ತದಳದ ನೆರವನ್ನು ಪಡೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.







