ಜಾರ್ಖಂಡ್:ಹಸಿವೆಯಿಂದ ವ್ಯಕ್ತಿ ಸಾವು
ಅನಾರೋಗ್ಯ ಕಾರಣವೆಂದ ಅಧಿಕಾರಿಗಳು

ರಾಮಗಡ,ಜು.27: ಜಿಲ್ಲೆಯ ನವಾದಿ ಗ್ರಾಮದಲ್ಲಿ ವ್ಯಕ್ತಿಯೋರ್ವ ಗುರುವಾರ ಸಾವನ್ನಪ್ಪಿದ್ದು,ಹಸಿವೆ ಈ ಸಾವಿಗೆ ಕಾರಣ ಎಂದು ಆತನ ಪತ್ನಿ ಹೇಳಿದ್ದಾಳೆ. ಈ ಕುಟುಂಬವು ಪಡಿತರ ಚೀಟಿಯನ್ನು ಹೊಂದಿಲ್ಲ.
ಬಿರ್ಹೋರ್ ಬುಡಕಟ್ಟಿಗೆ ಸೇರಿದ ರಾಜೇಂದ್ರ ಬಿರ್ಹೋರ್(40) ಮೃತ ವ್ಯಕ್ತಿ. ಆದರೆ ಆತ ಹಸಿವೆಯಿಂದ ಮೃತಪಟ್ಟಿದ್ದಾನೆ ಎನ್ನುವುದನ್ನುನಿರಾಕರಿಸಿರುವ ಜಿಲ್ಲಾಡಳಿತದ ಅಧಿಕಾರಿಗಳು,ಆತನ ಸಾವಿಗೆ ಅನಾರೋಗ್ಯ ಕಾರಣ ಎಂದು ಪ್ರತಿಪಾದಿಸಿದ್ದಾರೆ.
ತನ್ನ ಪತಿ ಕಾಮಾಲೆ ರೋಗದಿಂದ ಬಳಲುತ್ತಿದ್ದ ಮತ್ತು ಆಹಾರ ಹಾಗೂ ವೈದ್ಯರು ಬರೆದುಕೊಟ್ಟಿದ್ದ ಔಷಧಿಗಳನ್ನು ಖರೀದಿಸಲು ಕುಟುಂಬದ ಬಳಿ ಹಣವಿರಲಿಲ್ಲ ಎಂದು ಬಿರ್ಹೋರ್ ಪತ್ನಿ ಶಾಂತಿದೇವಿ(35) ತಿಳಿಸಿದಳು. ಸಬ್ಸಿಡಿ ದರಗಳಲಿ ಆಹಾರ ಸಾಮಗ್ರಿಗಳನ್ನು ಖರೀದಿಸಲು ತಮ್ಮ ಬಳಿ ಪಡಿತರ ಚೀಟಿಯೂ ಇಲ್ಲ ಎಂದು ಆಕೆ ಹೇಳಿದಳು.
ಆರು ಮಕ್ಕಳ ತಂದೆಯಾದ ಬಿರ್ಹೋರ ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದು. ಇತ್ತೀಚಿಗೆ ಆತನನ್ನು ಇಲ್ಲಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ಬಳಿಕ ಬಿಡುಗಡೆಗೊಳಿಸಲಾಗಿತ್ತು.
ಗುರುವಾರ ಬಿರ್ಹೋರ್ ಮನೆಗೆ ಭೇಟಿ ನೀಡಿದ್ದ ಬಿಡಿಒ ಮನೋಜ ಕುಮಾರ ಗುಪ್ತಾ ಅವರು,ಆತನ ಸಾವಿಗೆ ಅನಾರೋಗ್ಯ ಕಾರಣವೇ ಹೊರತು ಹಸಿವೆಯಲ್ಲ ಎಂದು ಹೇಳಿದರು. ಆದರೆ ಕುಟುಂಬದ ಬಳಿ ಪಡಿತರ ಚೀಟಿ ಇಲ್ಲ ಎನ್ನುವುದನ್ನು ಒಪ್ಪಿಕೊಂಡ ಅವರು ಆಹಾರ ಧಾನ್ಯಗಳ ಜೊತೆಗೆ 10,000 ರೂ.ಗಳನ್ನು ನೀಡಿದರು. ಈ ಕುಟುಂಬಕ್ಕೆ ಪಡಿತರ ಚೀಟಿ ಏಕೆ ದೊರಕಿಲ್ಲ ಎಂಬ ಬಗ್ಗೆ ಪರಿಶೀಲಿಸುವುದಾಗಿ ಅವರು ತಿಳಿಸಿದರು.







