ಡಿಸಿಎಂ ಪರಮೇಶ್ವರ್ ಸಹೋದರ ಶಿವಪ್ರಸಾದ್ ಅಂತ್ಯಸಂಸ್ಕಾರ
ಅಂತಿಮ ದರ್ಶನ ಪಡೆದ ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತಿತರ ಗಣ್ಯರು

ತುಮಕೂರು,ಜು.27: ತುಮಕೂರಿನ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಸಹೋದರ ಡಾ.ಜಿ ಶಿವಪ್ರಸಾದ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವರು, ಶಾಸರು, ಗಣ್ಯ ವ್ಯಕ್ತಿಗಳು ಪಡೆದರು.
ತುಮಕೂರು ನಗರದ ಸಮೀಪವಿರುವ ಸಿದ್ಧಾರ್ಥ ನಗರದಲ್ಲಿರಿಸಿದ್ದ ಶಿವಪ್ರಸಾದ್ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿ, ಶಿವಪ್ರಸಾದ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ, ಕೇಂದ್ರ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಪ್ರಿಯಾಂಕ್ ಖರ್ಗೆ, ವೆಂಕಟರಮಣಪ್ಪ, ಶ್ರೀನಿವಾಸ್, ಕೃಷ್ಣಭೈರೇಗೌಡ, ಝಮೀರ್ ಅಹಮದ್ ಖಾನ್, ಕೆ.ಜೆ.ಜಾರ್ಜ್, ಡಿ.ಕೆ. ಶಿವಕುಮಾರ್, ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ, ಮೋಟಮ್ಮ, ಶ್ಯಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆ ಮತ್ತಿತರ ಜನಪ್ರತಿನಿಧಿಗಳು, ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಸೇರಿದಂತೆ ಸರಕಾರದ ಹಿರಿಯ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.
ಗೊಲ್ಲಹಳ್ಳಿಯ ತಮ್ಮ ತೋಟದ ಮನೆಯ ಪಕ್ಕದಲ್ಲಿಯೇ ಇರುವ ಹೆಚ್.ಎಂ.ಗಂಗಾಧರಯ್ಯ ಮತ್ತು ಅವರ ಶ್ರೀಮತಿಯ ಸಮಾಧಿಯ ಪಕ್ಕದಲ್ಲಿಯೇ ಭೌದ್ದ ಧರ್ಮದ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನಡೆದಿದ್ದು, ಮೃತ ಶಿವಪ್ರಸಾದ್ ರ ಪುತ್ರ ಡಾ.ಆನಂದ್ ಹಾಗು ಅಪಾರ ಬಂಧು ಬಳಗದವರು ಹಾಜರಿದ್ದರು.





