ಹಸಿವೆಯಿಂದ ಸಾಯುವ ಘಟನೆಗೆ ಮೋದಿ ಸರಕಾರ ನರೇಗ ಯೋಜನೆ ನಿರ್ಲಕ್ಷಿಸಿದ್ದೇ ಕಾರಣ: ಚಿದಂಬರಂ

ಹೊಸದಿಲ್ಲಿ, ಜು.27: ದಿಲ್ಲಿಯಲ್ಲಿ ಹಸಿವಿನಿಂದ ಮೂವರು ಬಾಲಕಿಯರು ಸಾವನ್ನಪ್ಪಿದ ಘಟನೆಯಂತೆ ದೇಶದಲ್ಲಿ ಯಾರು ಕೂಡಾ ಹಸಿವೆಯಿಂದ ಸಾಯಬಾರದು ಎಂಬ ಉದ್ದೇಶದಿಂದ ಈ ಹಿಂದಿನ ಯುಪಿಎ ಸರಕಾರ ಜಾರಿಗೊಳಿಸಿದ್ದ ಆಹಾರ ಭದ್ರತೆ ಕಾಯ್ದೆ ಮತ್ತು ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ನರೇಗ)ಯನ್ನು ಮೋದಿ ಸರಕಾರ ನಿರ್ದಯೆಯಿಂದ ನಿರ್ಲಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಆರೋಪಿಸಿದ್ದಾರೆ. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಎಂನರೇಗ)ಯು ಸಾಮಾಜಿಕ ಭದ್ರತೆಯ ಉದ್ಯೋಗ ಸೃಷ್ಟಿಸುವ ಕಾಯ್ದೆಯಾಗಿದ್ದು ಬಡಜನರಿಗೆ ಉದ್ಯೋಗ ಖಾತರಿಗೊಳಿಸುವ ಮೂಲಕ ಅವರಿಗೆ ಜೀವನಾಧಾರದ ಖಾತರಿ ನೀಡುವ ಯೋಜನೆಯಾಗಿದೆ. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯು ಬಡಜನರಿಗೆ ಸಬ್ಸಿಡಿ ದರದಲ್ಲಿ ಆಹಾರಧಾನ್ಯ ಒದಗಿಸುವ ಯೋಜನೆಯಾಗಿದೆ.
ಎಂನರೇಗಾ ಯೋಜನೆಯು ಹಸಿವೆ ದೂರಗೊಳಿಸುವ ಉದ್ದೇಶದ ಯೋಜನೆಯಾಗಿದ್ದರೆ ಆಹಾರ ಭದ್ರತೆ ಕಾಯ್ದೆಯು ಉಪವಾಸ ಬೀಳುವುದನ್ನು ತಪ್ಪಿಸುವ ಉದ್ದೇಶದ ಕಾಯ್ದೆಯಾಗಿದೆ. ಆದರೆ ಈ ಎರಡು ಯೋಜನೆಗಳನ್ನೂ ಮೋದಿ ಸರಕಾರ ನಿಷ್ಕರುಣೆಯಿಂದ ನಿರ್ಲಕ್ಷಿಸಿದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.





