ನಕಲಿ ದೇಶಭಕ್ತರ ಬಗ್ಗೆ ಯುವಜನತೆ ಎಚ್ಚರಿಕೆ ವಹಿಸಲಿ: ಪರಿಷತ್ ಸದಸ್ಯ ಆರ್.ಬಿ ತಿಮ್ಮಾಪುರ
ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ

ಬೆಂಗಳೂರು, ಜು.27: ದೇಶದಲ್ಲಿ ನಕಲಿ ದೇಶ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ದಲಿತ ಸಮುದಾಯದ ಯುವಜನತೆ ಇವರ ಬಗ್ಗೆ ಎಚ್ಚರಿಕೆಯಿಂದಿರಬೇಕೆಂದು ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ತಿಳಿಸಿದರು.
ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಕಲಿ ದೇಶಭಕ್ತರಿಂದ ದೇಶದಲ್ಲಿ ತಾರತಮ್ಯ ಹೆಚ್ಚುತ್ತಿದೆ. ಹೀಗಾಗಿ ಇಂತವರಿಂದ ದಲಿತ ಸಮುದಾಯದ ಯುವಜನತೆ ಅಂತರ ಕಾಯ್ದುಕೊಳ್ಳಬೇಕೆಂದು ಸೂಚಿಸಿದರು.
ಇವತ್ತಿನ ರಾಜಕೀಯ ಕ್ಷೇತ್ರದಲ್ಲಿ ಹಡಪದ ಸಮುದಾಯದ ಯಾರೊಬ್ಬರು ಶಾಸಕರಾಗಿಲ್ಲ. ಕೆಲವೆ ಗ್ರಾಮ ಪಂಚಾಯತ್‌ಗಳಲ್ಲಿ ಸದಸ್ಯರಾಗಿದ್ದಾರಷ್ಟೆ. ಇಂತಹ ಶೋಷಿತ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗುವ ನಿಟ್ಟಿನಲ್ಲಿ ನಾವೆಲ್ಲರೂ ಹಿಂದುಗಳೆಂದು ಹೇಳುವವರಿಂದ ಏನಾದರು ಪ್ರಯೋಜನವಾಗಿದೆಯಾ ಎಂದು ಪ್ರಶ್ನಿಸಿದ ಅವರು, ಇಂತಹ ನಕಲಿ ದೇಶಭಕ್ತರಿಂದ ಅಪಾಯವೆ ಹೆಚ್ಚೆಂದು ತಿಳಿಸಿದರು.
ರಾಜಕೀಯವೊಂದೆ ಕೀಲಿ ಕೈ: ಶೋಷಿತ ಸಮುದಾಯಗಳು ಆಮೂಲಾಗ್ರವಾಗಿ ಪ್ರಗತಿ ಸಾಧಿಸಬೇಕೆಂದರೆ ರಾಜಕೀಯ ಶಕ್ತಿವೊಂದೆ ಕೀಲಿ ಕೈ ಆಗಿದೆ. ಈ ನಿಟ್ಟಿನಲ್ಲಿ ದಲಿತ ಸಮುದಾಯಗಳು ಒಗ್ಗೂಡಿ ರಾಜಕೀಯ ಶಕ್ತಿಯಾಗಿ ರೂಪ ಪಡೆಯಬೇಕಾಗಿದೆ ಎಂದು ಅವರು ಆಶಿಸಿದರು.
ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಶರಣರ ಬಗ್ಗೆ ವಿಶೇಷ ಕಾಳಜಿ ವಹಿಸಿತ್ತು. ಹೀಗಾಗಿ ಎಲ್ಲ ಸಮುದಾಯಕ್ಕೂ ಸೇರಿದ ಶರಣರ ಜಯಂತಿಯನ್ನು ಸರಕಾರದ ವತಿಯಿಂದಲೆ ಆಚರಿಸಲು ಕ್ರಮ ಕೈಗೊಂಡಿತ್ತು. ಅದರ ಭಾಗವಾಗಿ ಹಡಪದ ಅಪ್ಪಣ್ಣ ಜಯಂತಿಯನ್ನು ಆಚರಿಸುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಭಾಗವಹಿಸಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ನಟರಾಜ್ ಬೂದಾಳು ಮಾತನಾಡಿ, ಶಿವಶರಣ ಹಡಪದ ಅಪ್ಪಣ್ಣ ಅವರು 125ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳ ತಾತ್ವಿಕತೆ ವಚನ ಚಳವಳಿಗೆ ಹೊಸ ನೋಟವನ್ನು ಕೊಟ್ಟಿತ್ತು. ಆದರೆ, ತಳ ಸಮುದಾಯಕ್ಕೆ ಸೇರಿದ ವಚನಕಾರರ ವಚನಗಳು ಮುಖ್ಯನೆಲೆಯಲ್ಲಿ ಚರ್ಚೆಗೆ ಒಳಗಾಗುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಹಡಪದ ಸಮುದಾಯವು ವ್ಯಕ್ತಿಗಳನ್ನು ಮುಟ್ಟಿ ಸೇವೆ ಮಾಡುವ ವೃತ್ತಿಯವರಾಗಿದ್ದಾರೆ. ಈ ವೃತ್ತಿಯು ದೇಶ ಜಾತಿ ವ್ಯವಸ್ಥೆಯಲ್ಲಿ ಇಂದಿಗೂ ವಿಶೇಷವೆಂದೆ ಭಾವಿಸಬೇಕಾಗಿದೆ. ಇವತ್ತಿಗೂ ಮೇಲ್ಜಾತಿ ಸಮುದಾಯದ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗೆ ಅವಕಾಶ ಸಿಕ್ಕಿದರೂ ಹೋಗುವುದಿಲ್ಲ. ಏಕೆಂದರೆ, ವೈದ್ಯ ವೃತ್ತಿಯಲ್ಲಿ ರೋಗಿಗಳನ್ನು ಮುಟ್ಟಿ ಚಿಕಿತ್ಸೆ ನೀಡಬೇಕೆಂಬ ಕಾರಣಕ್ಕಾಗಿ. ಹೀಗಾಗಿ ಹಡಪದ ಸಮುದಾಯ ಕ್ಷೌರಿಕ ವೃತ್ತಿಯ ಮೂಲಕ ಮನುಷ್ಯರ ಮುಖವನ್ನು ಸ್ವಚ್ಛಗೊಳಿಸುವುದರ ಜೊತೆಗೆ, ಸಮಾಜದ ಸ್ವಚ್ಛತೆಗೂ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಹಡಪದ ಸಮುದಾಯದ ಮುಖಂಡ ಅಣ್ಣಾರಾವ್ ಮತ್ತಿತರರಿದ್ದರು.
ಶೋಷಿತ ಸಮುದಾಯಗಳ ಆರ್ಥಿಕ ಪ್ರಗತಿಗೆ ರಾಜ್ಯ ಸರಕಾರ ವಿಶೇಷ ಆಸಕ್ತಿ ವಹಿಸಬೇಕು. ಈ ಸಮುದಾಯಗಳಿಗೆ ಸಾಲ ಸೌಲಭ್ಯ ನೀಡುವುದಕ್ಕಾಗಿಯೆ ಪ್ರತ್ಯೇಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿ ಮಾಡಿ, ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಬೇಕು. ಇಂತಹ ಸಕಾರಾತ್ಮಕ ಕಾರ್ಯಕ್ರಮಗಳಿಂದ ಮಾತ್ರ ತಳ ಸಮುದಾಯಗಳು ಸ್ವಾಭಿಮಾನದಿಂದ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
-ಆರ್.ಬಿ.ತಿಮ್ಮಾಪುರ, ವಿಧಾನಪರಿಷತ್ ಸದಸ್ಯ







