ಎಸ್‌ಟಿ ಮಾನ್ಯತೆಗೆ ಧಂಗಾರ್ ಸಮುದಾಯದ ಆಗ್ರಹ
ನಾಗಪುರ, ಜು.27: ಧಂಗಾರ್ ಸಮುದಾಯಕ್ಕೆ ಪರಿಶಿಷ್ಟ ಬುಡಕಟ್ಟು(ಎಸ್‌ಟಿ) ಎಂಬ ಮಾನ್ಯತೆ ನೀಡದಿದ್ದರೆ ಸಮುದಾಯದ ಸದಸ್ಯರು ಚಳವಳಿ ನಡೆಸಲಿದ್ದಾರೆ ಎಂದು ಧಂಗಾರ್ ಮುಖಂಡ ಹಾಗೂ ರಾಜ್ಯಸಭೆಯ ಸದಸ್ಯ ವಿಕಾಸ್ ಮಹಾತ್ಮೆ ಎಚ್ಚರಿಕೆ ನೀಡಿದ್ದಾರೆ. ತಮಗೆ ಎಸ್‌ಟಿ ಮಾನ್ಯತೆ ನೀಡಬೇಕೆಂಬುದು ಧಂಗಾರ್(ಕುರುಬ) ಸಮುದಾಯದ ಸುದೀರ್ಘಾವಧಿಯ ಬೇಡಿಕೆಯಾಗಿದೆ. ಎಸ್‌ಟಿ ಮಾನ್ಯತೆ ದೊರೆತರೆ ಸಮುದಾಯದವರಿಗೆ ಸರಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಸೌಲಭ್ಯ ದೊರೆಯುತ್ತದೆ.
ಈಗ ಈ ಸಮುದಾಯವನ್ನು ಮಹಾರಾಷ್ಟ್ರದಲ್ಲಿ ಅಲೆಮಾರಿ ಬುಡಕಟ್ಟು(ಎನ್‌ಟಿ) ಎಂದು ವರ್ಗೀಕರಿಸಲಾಗಿದೆ . ಮಹಾರಾಷ್ಟ್ರದಲ್ಲಿ ಮೀಸಲಾತಿ ಸೌಲಭ್ಯಕ್ಕೆ ಆಗ್ರಹಿಸಿ ಮರಾಠರು ಪ್ರತಿಭಟನೆ ನಡೆಸುತ್ತಿರುವ ಜೊತೆಗೇ ಈಗ ಧಂಗಾರ್ ಸಮುದಾಯವೂ ಮೀಸಲಾತಿಗೆ ಬೇಡಿಕೆ ಮುಂದಿರಿಸಿದೆ. ಕಳೆದ 70 ವರ್ಷಗಳಿಂದ ಸಮುದಾಯವು ಈ ಬೇಡಿಕೆ ಮುಂದಿರಿಸಿದೆ. ಬಿಜೆಪಿಯು ಚುನಾವಣೆಯ ಸಂದರ್ಭ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ರಾಜ್ಯ ಸರಕಾರವು ಎಸ್‌ಟಿ ಪಟ್ಟಿಯಲ್ಲಿ ಧಂಗಾರ್ ಸಮುದಾಯವನ್ನು ಸೇರ್ಪಡೆಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಇಲ್ಲದಿದ್ದರೆ ಮರಾಠರು ಮಾಡಿದಂತೆಯೇ ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ವಿಕಾಸ್ ಮಹಾತ್ಮೆ ಹೇಳಿದ್ದಾರೆ.





