ವೈರಲ್ ಹೆಪಟೈಟಿಸ್‌ನಿಂದ ಶೇ.22 ರಷ್ಟು ಮರಣ: ಡಾ.ಮಂಜುನಾಥ್ ಪಾಟೀಲ್
ಬೆಂಗಳೂರು, ಜು.27: ವೈರಾಣು ಪಿತ್ತ ಜನಕಾಂಗದ ಉರಿಯೂತ(ವೈರಲ್ ಹೆಪಟೈಟಿಸ್)ದಿಂದ ಏರ್ಪಡುವ ಮರಣದ ಸಂಖ್ಯೆ ಶೇ.22ನಷ್ಟು ಹೆಚ್ಚಾಗಿದ್ದು, ಇದನ್ನು ತಗ್ಗಿಸುವ ನಿಟ್ಟಿನಲ್ಲಿ ಜಾಗೃತಿಯ ಆಂದೋಲನಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಎಂ.ಎಸ್.ರಾಮಯ್ಯ ಆಸ್ಪತ್ರೆಯ ಡಾ.ಮಂಜುನಾಥ್ ಪಾಟೀಲ್ ತಿಳಿಸಿದ್ದಾರೆ.
ವಿಶ್ವವ್ಯಾಪಿಯಾಗಿ ವೈರಲ್ ಪಿತ್ತ ಜನಕಾಂಗ ಉರಿಯೂತವು ಮರಣಕ್ಕೆ ಪ್ರಮುಖ ಕಾರಣವಾಗಿದೆ. ಎಚ್‌ಐವಿ, ಮಲೇರಿಯಾ ಹಾಗೂ ಕ್ಷಯರೋಗಕ್ಕಿಂತಲೂ ಅಧಿಕ ಪ್ರಮಾಣದ ಸಾವುಗಳು ವೈರಾಣು ಪಿತ್ಥ ಜನಕಾಂಗದ ರೋಗದಿಂದ ಸಂಭವಿಸುತ್ತಿವೆ. ವಿಪರೀತ ಮದ್ಯಪಾನ ಸೇವನೆ, ವಿಷಕಾರಕಗಳು, ಕೆಲವು ಔಷಧಗಳು, ಮತ್ತು ಕೆಲವು ವೈದ್ಯಕೀಯ ಪರಿಸ್ಥಿತಿಗಳು ಹೆಪಟೈಟಿಸ್ ಉಂಟು ಮಾಡಬಹುದು. ಆದರೆ, ಅನೇಕ ಸಂದರ್ಭಗಳಲ್ಲಿ ಪಿತ್ತ ಜನಕಾಂಗದ ಉರಿಯೂತವು ವೈರಾಣುನಿಂದಲೇ ಏರ್ಪಡುತ್ತದೆ. ಈ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವುದು ತುರ್ತು ಅಗತ್ಯವಾಗಿದೆ ಎಂದು ಅವರು ಹೇಳಿದರು.
ದೀರ್ಘಕಾಲದ ವೈರಲ್ ಪಿತ್ತ ಜನಕಾಂಗದ ಉರಿಯೂತವನ್ನು ನಿವಾರಿಸುವಲ್ಲಿ ಇರುವ ದೊಡ್ಡ ಸವಾಲೆಂದರೆ, ಸೋಂಕು ಏರ್ಪಟ್ಟ ವ್ಯಕ್ತಿಗೆ ಅವರ ದೀರ್ಘಕಾಲಿಕ ವಾಹಕ ಸ್ಥಿತಿಯ ಅರಿವಿಲ್ಲದಿರುವುದು ಮತ್ತು ಇತರರಿಗೆ ಸೋಂಕು ಹರಡುವುದರ ಬಗ್ಗೆ ಅರಿವಿಲ್ಲದಿರುವುದು. ಸೋಂಕುಪೀಡಿತ ವ್ಯಕ್ತಿಗಳನ್ನು ಗುರುತಿಸುವುದಕ್ಕೆ ಸ್ಕ್ರೀನಿಂಗ್‌ನೊಂದಿಗೆ ಎಚ್‌ಸಿ ಹಾಗೂ ಎಚ್‌ಬಿ ಪರೀಕ್ಷೆ ಅಗತ್ಯವಾಗಿದೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





