ಆ.2 ರಂದು ಹೊಸದಿಲ್ಲಿಯಲ್ಲಿ ಅಸಂಘಟಿತ ಕಾರ್ಮಿಕರ ಬೃಹತ್ ಜಾಥಾ
ಬೆಂಗಳೂರು, ಜು.27: ಕಾರ್ಮಿಕರ ಪರವಾದ ಕಾನೂನು ಮತ್ತು ನಿಯಮಗಳನ್ನು ಜಾರಿಗೆ ತರುವಂತೆ ಹಾಗೂ ಕಾನೂನು ತಿದ್ದುಪಡಿ ಕೈಬಿಡುವಂತೆ ಆಗ್ರಹಿಸಲು ಆ.2ರಂದು ಹೊಸದಿಲ್ಲಿಯಲ್ಲಿ ಅಸಂಘಟಿತ ಕಾರ್ಮಿಕರ ಬೃಹತ್ ಜಾಥಾ ಹಾಗೂ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಅಸಂಘಟಿತ ಕಾರ್ಮಿಕ ಒಕ್ಕೂಟದ ಸಿಸ್ಟರ್ ಸಗಾಯ್, ಕೇಂದ್ರ ಸರಕಾರ ಪ್ರಸ್ತುತವಿರುವ ಕಾರ್ಮಿಕ ಕಾನೂನುಗಳನ್ನು ಸರಳೀಕರಿಸಲು ಹೊರಟಿದೆ. ವೇತನ, ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ ಮತ್ತು ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿಗತಿಗಳನ್ನು ನಾಲ್ಕು ಸಂಹಿತೆಗಳಲ್ಲಿ ಕ್ರೋಡೀಕರಿಸಲು ಹೊರಟಿದೆ. ಇದರಿಂದ ಕಾರ್ಮಿಕ ಕಾನೂನು ಶಕ್ತಿ ಕಳೆದುಕೊಂಡು ಮೂಲೆಗುಂಪಾಗಲಿದೆ. ಕಾರ್ಮಿಕರು ಉದ್ಯೋಗ, ವೇತನ ಹಾಗೂ ಸಾಮಾಜಿಕ ಭದ್ರತೆಯಿಂದ ವಂಚಿತಗೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರು ಇಂದು ಹಲವಾರು ರೀತಿಯ ಶೋಷಣೆ, ದೌರ್ಜನ್ಯ ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸರಕಾರ ಅಸಂಘಟಿತ ಕಾರ್ಮಿಕರ ಕಾಯ್ದೆಗೆ ತಿದ್ದುಪಡಿ ತಂದರೆ, ಕಾರ್ಮಿಕರೆಲ್ಲ ಬೀದಿಗೆ ಬೀಳಲಿದ್ದಾರೆ. ಹಾಗಾಗಿ ಕೇಂದ್ರ ಸರಕಾರ ಅಸಂಘಟಿತ ಕಾರ್ಮಿಕರ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು. ಗೃಹ ಕಾರ್ಮಿಕರಿಗಾಗಿ ಒಂದು ಪ್ರತ್ಯೇಕ ಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ದೇಶಾದ್ಯಂತ ಅಸಂಘಟಿತ ಕಾರ್ಮಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇವರಿಗೆ ಕೆಲಸದ ಭದ್ರತೆ, ಸಂಬಳದ ಭದ್ರತೆ ಮತ್ತು ಸಾಮಾಜಿಕ ಭದ್ರತೆ ಇಲ್ಲವಾಗಿದೆ. ಅವೆಲ್ಲವನ್ನೂ ಖಾತರಿ ಪಡಿಸುವುದು ಪ್ರಜಾಪ್ರಭುತ್ವ ಸರಕಾರದ ಕರ್ತವ್ಯವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಕವಿತಾ, ಮಮತಾ, ಶೋಭಾ ಉಪಸ್ಥಿತರಿದ್ದರು.







