ರಶ್ಯದಿಂದ ಶಸ್ತ್ರ ಖರೀದಿಸಲು ಭಾರತಕ್ಕೆ ಅಮೆರಿಕ ಒಪ್ಪಿಗೆ
ರಕ್ಷಣಾ ವೆಚ್ಚ ಮಸೂದೆ ಅಂಗೀಕಾರ

ವಾಶಿಂಗ್ಟನ್.ಜು.27: ರಶ್ಯದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಭಾರತ ಹಾಗೂ ಇತರ ದೇಶಗಳಿಗೆ ಅವಕಾಶ ಮಾಡಿಕೊಡುವ ರಕ್ಷಣಾ ವೆಚ್ಚ ಮಸೂದೆಯೊಂದನ್ನು ಅಮೆರಿಕ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗುರುವಾರ ಅಂಗೀಕರಿಸಿದೆ.
ರಶ್ಯದಿಂದ ಗಣನೀಯ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿಸುವ ದೇಶಗಳ ವಿರುದ್ಧ ದಿಗ್ಬಂಧನಗಳನ್ನು ವಿಧಿಸಲು ಅವಕಾಶ ಮಾಡಿಕೊಡುವ ಕಾನೂನಿಗೆ ತಿದ್ದುಪಡಿ ಮಾಡುವ ಉದ್ದೇಶವನ್ನು ಈ ಮಸೂದೆ ಹೊಂದಿದೆ.
ರಶ್ಯದಿಂದ ಎಸ್-400 ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಭಾರತ ಬಯಸಿರುವುದನ್ನು ಸ್ಮರಿಸಬಹುದಾಗಿದೆ.
716 ಬಿಲಿಯ ಡಾಲರ್ ವೆಚ್ಚದ ರಾಷ್ಟ್ರೀಯ ರಕ್ಷಣಾ ಅನುಮೋದನೆ ಕಾಯ್ದೆ 2019 (ಸೇನಾ ಬಜೆಟ್)ನ್ನು ಸದನವು 359-54 ಮತಗಳ ಅಂತರದಿಂದ ಅಂಗೀಕರಿಸಿತು. ಇನ್ನು ಈ ಮಸೂದೆಯು ಸೆನೆಟ್‌ನಲ್ಲಿ ಅಂಗೀಕಾರಗೊಳ್ಳಬೇಕಾಗಿದೆ.
ಭಾರತದೊಂದಿಗೆ ಜೊತೆಯಾಗಿ ಕೆಲಸ ಮಾಡಲು ಅಮೆರಿಕ ಉತ್ಸುಕ: ವಿದೇಶಾಂಗ ಇಲಾಖೆ ಅಧಿಕಾರಿ
ಭಾರತ ಮತ್ತು ಅಮೆರಿಕಗಳ ನಡುವಿನ ‘ಟು ಪ್ಲಸ್ ಟು’ ಮಾತುಕತೆ (ಎರಡು ದೇಶಗಳ ತಲಾ ಇಬ್ಬರು ಪ್ರತಿನಿಧಿಗಳ ನಡುವೆ ಏಕಕಾಲದಲ್ಲಿ ಮಾತುಕತೆ)ಗೆ ಪೂರ್ವಭಾವಿಯಾಗಿ, ದ್ವಿಪಕ್ಷೀಯ ಬಾಂಧವ್ಯವನ್ನು ಬೆಳೆಸಲು ಉಭಯ ದೇಶಗಳು ರಾಜತಾಂತ್ರಿಕ ಮತ್ತು ಸೇನಾ ಕ್ಷೇತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಲಿವೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಅಮೆರಿಕ ಸಂಸದರಿಗೆ ತಿಳಿಸಿದರು.
ಹೊಸದಿಲ್ಲಿಯಲ್ಲಿ ಸೆಪ್ಟಂಬರ್‌ನಲ್ಲಿ ನಡೆಯಲಿರುವ ‘ಟು ಪ್ಲಸ್ ಟು’ ಸಭೆಯನ್ನು ಅಮೆರಿಕ ಎದುರು ನೋಡುತ್ತಿರುವುದಾಗಿ ಕಾಂಗ್ರೆಸ್ ವಿಚಾರಣೆಯ ವೇಳೆ ದಕ್ಷಿಣ ಮತ್ತು ಮಧ್ಯ ಏಶ್ಯಗಳಿಗಾಗಿನ ಪ್ರಧಾನ ಉಪ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಆಲಿಸ್ ವೆಲ್ಸ್ ಹೇಳಿದರು.
ಮಾತುಕತೆಯ ವೇಳೆ, ದ್ವಿಪಕ್ಷೀಯ ಬಾಂಧವ್ಯದಲ್ಲಿ ಗಣನೀಯ ಪ್ರಗತಿ ಸಾಧಿಸುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು.







