ಕಾನೂನು ಕಾಯ್ದೆಗಳ ಬಗ್ಗೆ ಅರಿವು ಕಡಿಮೆ: ನ್ಯಾ.ಡಿ.ಎಚ್.ವಘೇಲಾ

ಬೆಂಗಳೂರು, ಜು.27: ಮಹಿಳೆಯರ ಮೇಲೆ ದೌರ್ಜನ್ಯ, ಕಾನೂನು ಉಲ್ಲಂಘನೆ ಪ್ರಮಾಣ ದಿನೇ ದಿನೇ ಅಧಿಕವಾಗುತ್ತಿದ್ದರೂ, ಇದನ್ನು ನಿಯಂತ್ರಿಸುವ ಕಾನೂನಿನಲ್ಲಿರುವ ಕಾಯ್ದೆಗಳ ಬಗ್ಗೆ ಅರಿವು ಕಡಿಮೆಯಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಆಧ್ಯಕ್ಷ ನ್ಯಾ.ಡಿ.ಎಚ್.ವಘೇಲಾ ಬೇಸರ ವ್ಯಕ್ತಪಡಿಸಿದರು.
ಶುಕ್ರವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಕುರಿತಂತೆ ಗ್ಲೋಬಲ್ ಕನ್ಸರ್ನ್ ಇಂಡಿಯಾ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಸಹಯೋಗದಲ್ಲಿ ಆಯೋಜಿಸಿದ್ದ, ಎರಡು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾನೂನಿನಲ್ಲಿರುವ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಸಂತ್ರಸ್ಥೆಗೆ ನ್ಯಾಯ ಒದಗಿಸಲು ಪೋಲಿಸ್ ಇಲಾಖೆ, ಮಾನವ ಹಕ್ಕುಗಳ ಆಯೋಗ ಹಾಗೂ ನ್ಯಾಯಾಂಗ ವ್ಯವಸ್ಥೆಯೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ಕೌಟುಂಬಿಕ ಹಿಂಸೆ ಹಾಗೂ ಲೈಂಗಿಕ ಕಾಯ್ದೆಗಳ ಮಾಹಿತಿ ಬಗ್ಗೆ ಶೇ.70ರಷ್ಟು ಜನರಿಗೆ ಮಾಹಿತಿ ತಿಳಿದಿಲ್ಲ. ಹೀಗಾಗಿಯೇ ಸಮಾಜದಲ್ಲಿ ಶೋಷಣೆ ಪ್ರಮಾಣ ಹೆಚ್ಚಾಗುತ್ತಿದೆ ಎಂದ ಅವರು, ಯಾವುದೇ ವ್ಯಕ್ತಿ ಅಪರಾಧ ಮಾಡಿದರೆ ಆತನಿಗೆ ಶಿಕ್ಷೆ ಪ್ರಮಾಣ ಹೆಚ್ಚಿಸಬೇಕು. ಆಗ ಅವನು ಅಪರಾಧ ಮಾಡಲು ಹಿಂಜರಿಯುತ್ತಾನೆ. ಆಗ ಸಮಾಜದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗುತ್ತದೆ ಎಂದರು.
ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಸಂಖ್ಯೆ ಕಡಿಮೆಯಿದ್ದರೂ ಉತ್ತಮ ಕೆಲಸ ಮಾಡುತ್ತಿದೆ. ಅದರಲ್ಲೂ ಬೆಂಗಳೂರು ಪೊಲೀಸರ ಕೆಲಸ ಶ್ಲಾಘನೀಯ ಎಂದು ಅಭಿನಂದಿಸಿದರು. ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ವಾರದ ರಜೆ ಸೌಲಭ್ಯ ಸೇರಿದಂತೆ ಪೊಲೀಸರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು ಎಂದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಮಾತನಾಡಿ, ಪೋಷಕರು ಮಕ್ಕಳಿಗೆ ಸಂಸ್ಕಾರ ಕಲಿಸಿದರೆ, ಅವರು ಅಡ್ಡದಾರಿ ಹಿಡಿಯುವುದಿಲ್ಲ. ಹೀಗಾಗಿ, ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣೆ ಹೋರಾಟಗಾರ್ತಿ ಬೃಂದಾ ಅಡಿಗೆ, ಅಮೃತ್ ಕುಮಾರ್, ಅರುಂಧತಿ, ಶೋಭಾ ಸೇರಿ ಪ್ರಮುಖರಿದ್ದರು.







