ತುಮಕೂರು: ರೈತರಿಂದ ಲಂಚ ಸ್ವೀಕಾರ ಆರೋಪ; ಗ್ರಾ.ಪಂ.ಕಾರ್ಯದರ್ಶಿಗೆ ಜೈಲು ಶಿಕ್ಷೆ

ತುಮಕೂರು,ಜು.27: ರೈತರೊಬ್ಬರು ತಮ್ಮ ಭೂಮಿಯಲ್ಲಿ ಎನ್.ಆರ್.ಇ.ಜಿ.ಎ ಯೋಜನೆಯಡಿ ನಿರ್ಮಿಸಿದ್ದ ತಡೆಹಳ್ಳಕ್ಕೆ ಬಿಲ್ ಪಾವತಿಸಲು 500 ರೂ ಲಂಚ ಸ್ವೀಕರಿಸಿದ ಆರೋಪದ ಮೇಲೆ ತಿಪಟೂರು ತಾಲೂಕು ಕರಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಹನುಮಂತರಾಯಪ್ಪ ಅವರಿಗೆ ತುಮಕೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.
2010ರ ಸೆಪ್ಟಂಬರ್ 1 ರಂದು ಕರಡಿ ಗ್ರಾ.ಪಂ ವ್ಯಾಪ್ತಿಯ ಶಿಡ್ಲೆಹಳ್ಳಿ ಗ್ರಾಮದ ಸರ್ವೆ ನಂ.10 ಪಿ.3 ರ ಕಾಮಗಾರಿಗೆ ರೂ 17,083 ರೂ ಆಗಿದ್ದು, ಇದರ ಬಿಲ್ ಪಾವತಿಸಲು ನಿಯಮಾನುಸಾರ ಗ್ರಾ.ಪಂ.ಕಾರ್ಯದರ್ಶಿ ಅವರಿಗೆ ಅರ್ಜಿ ಸಲ್ಲಿಸಲಾಗಿತ್ತು. ಸದರಿ ಬಿಲ್ ಪಾವತಿಸಲು 500 ರೂ ಲಂಚವನ್ನು ತಿಪಟೂರು ರೈಲ್ವೆ ನಿಲ್ದಾಣದಲ್ಲಿ ಸ್ವೀಕರಿಸುವಾಗ ಲಂಚದ ಹಣದ ಸಮೇತ ಲೋಕಾಯುಕ್ತ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಸದರಿ ಕೇಸಿನ ವಿಚಾರಣೆ ನಡೆಸಿದ ತುಮಕೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಭರತಕುಮಾರ್ ಅವರು ಐದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.





