ಶಾಸಕ ಎಚ್.ಕೆ.ಕುಮಾರಸ್ವಾಮಿಗೆ ಹೈಕೋರ್ಟ್ ನೋಟಿಸ್
ಸಕಲೇಶಪುರ ಕ್ಷೇತ್ರ ಮತ ಎಣಿಕೆ ಕಾರ್ಯದಲ್ಲಿ ಲೋಪ ಆರೋಪ

ಬೆಂಗಳೂರು, ಜು.27: ಕಳೆದ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಸಕಲೇಶಪುರ ಕ್ಷೇತ್ರದ ಮತ ಎಣಿಕೆ ಕಾರ್ಯದಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಆ ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿಗೆ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ಎ.ವಿ.ನರೇಶ್ ಎಂಬಾತ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ಏಕಸದಸ್ಯ ಪೀಠ, ಶಾಸಕ ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಅರ್ಜಿಯಲ್ಲಿ ಏಳು ಮಂದಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಆ.31ಕ್ಕೆ ಮುಂದೂಡಿತು.
ಅರ್ಜಿದಾರ ಎ.ವಿ.ನರೇಶ್ ಅವರು, ಚುನಾವಣೆಯಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ಜಯರಾಜ್ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದ ಅರಕೆರೆಯ ಮತದಾರ. ಸಕಲೇಶಪುರ ಕ್ಷೇತ್ರದಲ್ಲಿ ಎಚ್.ಕೆ.ಕುಮಾರಸ್ವಾಮಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿರುವ ಅವರು, ಇವಿಎಂ ಯಂತ್ರಗಳಲ್ಲಿದ್ದ ಮತಗಳ ಎಣಿಕೆ ಕಾರ್ಯದಲ್ಲಿ ಸಾಕಷ್ಟು ಲೋಪದೋಷಗಳಾಗಿವೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ವಾಸ್ತವವಾಗಿ ಚಲಾವಣೆಗೊಂಡ ಮತಗಳ ಸಂಖ್ಯೆಗೂ ಮತ್ತು ಎಣಿಕೆ ಮಾಡಿರುವ ಮತಗಳ ಸಂಖ್ಯೆಗೆ ತಾಳೆಯಾಗುತ್ತಿಲ್ಲ. ಒಂದೇ ಬೂತ್‌ನ ಮತಗಳನ್ನು ಒಂದೇ ಅಭ್ಯರ್ಥಿಗೆ ಎರಡು ಬಾರಿ ಪರಿಗಣಿಸಲಾಗಿದೆ. ಮತ ಎಣಿಕೆಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿಗಳೇ ಇಲ್ಲ. ಹೀಗಾಗಿ, ಕ್ಷೇತ್ರದ ಎಲ್ಲ 283 ಮತಗಟ್ಟೆಗಳ ಮತಗಳನ್ನು ಎಣಿಕೆ ನಡೆಸಲು ಮತ್ತು ಪರಾಭವಗೊಂಡಿರುವ ಬಿಜೆಪಿಯ ಸೋಮಶೇಖರ್ ಜಯರಾಜ್ ಅವರನ್ನು ಜಯಶಾಲಿ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಅರ್ಜಿಯಲ್ಲಿ ನ್ಯಾಯಾಲಯವನ್ನು ಕೋರಿದ್ದಾರೆ.







