ಕೇಂದ್ರ ಸರಕಾರ ಜೊತೆ ಮಾತುಕತೆ ಸಫಲ: ಲಾರಿ ಮಾಲಕರ ಮುಷ್ಕರ ಅಂತ್ಯ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.27: ಟೋಲ್ ಮುಕ್ತ, ಡೀಸೆಲ್ ದರ ಜಿಎಸ್ಟಿ ಅಡಿಯಲ್ಲಿ ಸೇರ್ಪಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ ಒಂದು ವಾರದಿಂದ ಲಾರಿ ಮಾಲಕರು ಹಮ್ಮಿಕೊಂಡಿದ್ದ ಮುಷ್ಕರ ಕೇಂದ್ರ ಸರಕಾರದ ಮಧ್ಯಪ್ರವೇಶ ಮಾಡಿ ಮಾತುಕತೆ ನಡೆಸಿದ್ದರಿಂದಾಗಿ ಮಾಲಕರು ಮುಷ್ಕರವನ್ನು ಹಿಂಪಡೆದಿದ್ದಾರೆ.
ಕಳೆದ ಒಂದು ವಾರದಿಂದ ರಾಜ್ಯದ ಆರೂವರೆ ಲಕ್ಷ ಸರಕು ಸಾಗಾಣಿಕೆ ಲಾರಿಗಳು ಸೇರಿದಂತೆ ದೇಶಾದ್ಯಂತ ಸುಮಾರು 90 ಲಕ್ಷ ಲಾರಿಗಳು ರಸ್ತೆಗಿಳಿದಿಲ್ಲ. ಮುಷ್ಕರದಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸರಕು ಸಾಗಾಣಿಕೆಯ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ರಫ್ತು ವಹಿವಾಟು ಸೇರಿದಂತೆ ದಿನಬಳಕೆ ವಸ್ತುಗಳ ತೀವ್ರ ಕೊರತೆ ಎದುರಾಗಿ, ದೇಶದಾದ್ಯಂತ ತರಕಾರಿ, ಹಣ್ಣು ಹಾಗೂ ದಿನಸಿ ಪದಾರ್ಥಗಳಲ್ಲಿ ತೀವ್ರ ಕೊರತೆ ಎದುರಿಸುವಂತಾಗಿತ್ತು.
ಅಲ್ಲದೆ, ಕೈಗಾರಿಕೆಗಳಿಗೆ ಸರಬರಾಜಾಗಬೇಕಾಗಿದ್ದ ಕೆಮಿಕಲ್, ಪೇಪರ್, ಬಟ್ಟೆ, ಕಚ್ಛಾ ಪದಾರ್ಥಗಳು ಪೂರೈಕೆಯಾಗಿಲ್ಲ. ಸರಕು ಸಾಗಾಣಿಕೆ ವಾಹನಗಳನ್ನು ನಂಬಿಕೊಂಡು ಬದುಕುತ್ತಿದ್ದ ಲಕ್ಷಾಂತರ ಜನರ ಬದುಕು ಅತಂತ್ರವಾಗಿತ್ತು. ಅಲ್ಲದೆ, ಲಾರಿ ಮಾಲಕರ ಮುಷ್ಕರ ದೇಶದ ಆಮದು ಹಾಗೂ ರಫ್ತಿನ ಮೇಲೆ ಭಾರಿ ಪರಿಣಾಮ ಬೀರಿತ್ತು. ಮಾಲಕರಿಗೆ ಮತ್ತು ಸರಕಾರಕ್ಕೆ ಸಾವಿರಾರು ಕೋಟಿ ರೂ.ಗಳು ನಷ್ಟವಾಗಿತ್ತು.
ಇದೀಗ ಮುಷ್ಕರ ಅಂತ್ಯಗೊಂಡಿದ್ದು, ಇಂದಿನಿಂದ ದೇಶದಾದ್ಯಂತ ಸರಕು ಸಾಗಾಣಿಕೆ ವಾಹನಗಳು ಸಂಚಾರ ಮಾಡುವುದರಿಂದ ಅಡಚಣೆ ನಿವಾರಣೆಯಾಗಲಿದೆ.
ಅತಿ ಸಣ್ಣ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕಳೆದ ಒಂದು ವಾರದಿಂದಲೂ ಲಕ್ಷಾಂತರ ಲಾರಿಗಳ ಸಂಚಾರ ಸ್ಥಗಿತ ಮಾಡಲಾಗಿತ್ತು. ನಮ್ಮ ಮುಷ್ಕರಕ್ಕೆ ಎಲ್ಲ ಸರಕು ಮತ್ತು ಸಾಗಾಣಿಕೆ ವಾಹನಗಳ ಮಾಲಕರು ಸಹಕಾರ ನೀಡಿದ್ದರು. ಅದರ ಪರಿಣಾಮದಿಂದಾಗಿ ಕೇಂದ್ರ ಸರಕಾರದೊಂದಿಗೆ ನಡೆದ ಮಾತುಕತೆಯಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಮುಷ್ಕರವನ್ನು ಹಿಂಪಡೆದಿದ್ದೇವೆ.
-ಜಿ.ಆರ್.ಷಣ್ಮುಗಪ್ಪ, ಲಾರಿ ಮಾಲಕರ ಸಂಘದ ಅಧ್ಯಕ್ಷ







