ಶಬರಿಮಲೆ: ಮಹಿಳೆಯರ ಪ್ರವೇಶ ವಿವಾದ
‘ಜಲ್ಲಿಕಟ್ಟು’ ಮಾದರಿ ಹೋರಾಟ: ಟಿಡಿಬಿ ಮಾಜಿ ಅಧ್ಯಕ್ಷ ಚಿಂತನೆ

ತಿರುವನಂತಪುರ, ಜು. 26: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿಷೇಧ ಪಾಲಿಸಲು ತಮಿಳುನಾಡಿನಲ್ಲಿ ಕಳೆದ ವರ್ಷ ಜಲ್ಲಿಕಟ್ಟು ಪರವಾಗಿ ನಡೆದ ಹೋರಾಟದಂತೆ ಚಳುವಳಿ ನಡೆಸಲಾಗುವುದು ಎಂದು ತಿರುವಾಂಕೂರು ದೇವಸ್ವ ಮಂಡಳಿ ಮಾಜಿ ಅಧ್ಯಕ್ಷರು ಹೇಳಿದ್ದಾರೆ. ‘‘ಶಬರಿಮಲೆಗೆ ಮಹಳೆಯರ ಪ್ರವೇಶ ನಿಷಿದ್ದತೆಯ ಬಗ್ಗೆ ಭಕ್ತರನ್ನು ಜಾಗೃತಿಗೊಳಿಸಲು ನಾವು ರಾಜ್ಯಾದ್ಯಂತದ ಎಲ್ಲ ದೇವಾಲಯಗಳಲ್ಲಿ ಪ್ರಾರ್ಥನೆ ಆಯೋಜಿಸಲಿದ್ದೇವೆ. ಹಿಂದೂ ಧಾರ್ಮಿಕ ನಾಯಕರು ಮಾತ್ರವಲ್ಲ, ಇತರ ಧರ್ಮಗಳ ಮುಖಂಡರು ಕೂಡ ಇದನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ. ಜುಲೈ 31ರಂದು ಅಭಿಯಾನ ಆರಂಭವಾಗಲಿದೆ’’ ಎಂದು ಕಾಂಗ್ರೆಸ್ ನಾಯಕರೂ ಆಗಿರುವ ಪ್ರಯಾರ್ ಗೋಪಾಲಕೃಷ್ಣ ಅವರು ಹೇಳಿದ್ದಾರೆ. ಜೆಲ್ಲಿಕಟ್ಟುವಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ವಿರೋಧಿಸಿ ಕಳೆದ 2017ರಲ್ಲಿ ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆದಿತ್ತು. ದೇವಾಲಯದ ಸಂಪ್ರದಾಯವನ್ನು ಬದಲಾಯಿಸುವ ಪ್ರಸ್ತಾಪಕ್ಕೆ ಹೆಚ್ಚಿನ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ. ದೇವಾಲಯಕ್ಕೆ ಕಳಂಕ ತರಲು ಈ ವಿಷಯದ ಕುರಿತು ವಿವಾದ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
‘‘ವಿವಿಧ ದೇವಾಲಯಗಳಲ್ಲಿ ವಿವಿಧ ಸಂಪ್ರದಾಯಗಳು ಇರುತ್ತವೆ. ತಿರುವನಂತಪುರದಲ್ಲಿರುವ ಆಟುಕ್ಕಳ್ ದೇವಿ ದೇವಾಲಯದಲ್ಲಿ ವಾರ್ಷಿಕ ಪೊಂಗಲ್ ಪೂಜೆಯಲ್ಲಿ ಪುರುಷರಿಗೆ ಪ್ರವೇಶ ಇಲ್ಲ. ಮಲಯಿಂಕೀಜು ಶ್ರೀ ಕೃಷ್ಣ ದೇವಾಲಯಕ್ಕೆ ನಿರ್ದಿಷ್ಟ ಸಮಯದಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲ. ನಾವು ಈ ಸಂಪ್ರದಾಯಗಳಿಗೆ ಗೌರವ ನೀಡಬೇಕು.’’
-ಪ್ರಯಾರ್ ಗೋಪಾಲಕೃಷ್ಣ





