ಹನೂರು: ಸವಿತಾ ಸಮಾಜದ ವತಿಯಿಂದ ಹಡಪದ ಅಪ್ಪಣ್ಣ ಜಯಂತಿ

ಹನೂರು,ಜು.27: ಹನ್ನೆರಡನೇ ಶತಮಾನದಲ್ಲಿಯೇ ಶಿಕ್ಷಣ ಕಲಿತು ವಚನಗಳನ್ನು ಸಾರಿದ ಹಡಪದ ಅಪ್ಪಣ್ಣ ಸಮಕಾಲೀನರಾಗಿದ್ದು, ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರಾಗಿದ್ದಾರೆ ಎಂದು ಹನೂರು ಘಟಕದ ಬಿಎಸ್‍ಪಿ ಅಧ್ಯಕ್ಷ ಶಾಗ್ಯ ಮಹೇಶ್ ತಿಳಿಸಿದರು.
ಹನೂರು ಪಟ್ಟಣದ ಆರ್.ಎಂ.ಸಿ ಆವರಣದಲ್ಲಿ ಸವಿತಾ ಸಮಾಜ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಡಪದ ಅಪ್ಪಣ್ಣ ಅವರು ಸುಮಾರು 200 ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದು, ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದಾರೆ. ಸವಿತಾ ಸಮಾಜದ ಜನಾಂಗ ರಾಷ್ಟ್ರ ವ್ಯಾಪಿ ಇರುವಂತಹ ಸಮುದಾಯವಾಗಿದ್ದು, ಪ್ರತಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ ಸಮಾಜ ಮುಖ್ಯವಾಹಿನಿಗೆ ತನ್ನಿ. ಶೈಕ್ಷಣಿಕ, ಆರ್ಥಿಕವಾಗಿ ಸಬಲರಾಗುವಂತೆ ಅವರ ಭವಿಷ್ಯ ರೂಪಿಸಿ ಮತ್ತು ಸ್ಥಳೀಯ ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ನಿಮ್ಮ ಹಕ್ಕನ್ನು ಪಡೆದುಕೊಳ್ಳಬೇಕು. ಸಂಘದ ಮೂಲಕ ನಿಮ್ಮ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸುವ ಮೂಲಕ ಸಂಘವು ಸಮುದಾಯದ ಏಳಿಗೆಗೆ ಶ್ರಮಿಸುವಂತಾಗಬೇಕು ಎಂದರು.
ಗ್ರಾಮ ಪಟ್ಟಣದ ಬೀದಿಗಳನ್ನು ಶುಚಿತ್ವಗೊಳಿಸುವವರು, ಮನುಷ್ಯರನ್ನು ಸುಂದರರನ್ನಾಗಿ ಮಾಡುವವರು ಸವಿತಾ ಸಮಾಜದವರು ಎಂದು ಅಭಿಪ್ರಾಯಪಟ್ಟ ಅವರು, ಸವಿತಾ ಸಮಾಜದವರು ದೇಶದಲ್ಲಿ ವಿರಳರಾಗಿದ್ದರೂ ಸಹ ಎಲ್ಲಾ ಸಮುದಾಯಗಳು ಅವರನ್ನು ಅವಲಂಬಿತವಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಮಮತ ಮಹದೇವ್, ಉಪಾದ್ಯಕ್ಷ ಬಸವರಾಜು, ಕರವೇ ಸ್ವಾಬಿಮಾನಿ ಬಣದ ಅಧ್ಯಕ್ಷ ವಿನೋದ್, ಪಟ್ಟಣದ ಸರ್ಕಾರಿ ಶಾಲಾ ಪ್ರಭಾರಿ ಮುಖ್ಯ ಶಿಕ್ಷಕ ಶಿವಲಿಂಗನಾಯಕ, ಬಿ.ಆರ್.ಪಿ ಶ್ರೀನಿವಾಸ್‍ನಾಯ್ಡು, ಹನೂರು ಸವಿತಾ ಸಮಾಜ ಸಂಘದ ಅಧ್ಯಕ್ಷ ರಾಜು, ಪದಾಧಿಕಾರಿಗಳಾದ ವೆಂಕಟೇಶ್, ಮಂಜು, ಕುಮಾರ್, ಪಾಂಡು ಇನ್ನಿತರರು ಇದ್ದರು.







