ಕರುಣಾನಿಧಿ ಆರೋಗ್ಯದಲ್ಲಿ ಏರುಪೇರು

ಚೆನ್ನೈ, ಜು. 27: ಮೂತ್ರ ಸೋಂಕಿನಿಂದ ಜ್ವರ ಬಾಧೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ಪಕ್ಷದ ವರಿಷ್ಠ ಎಂ. ಕರುಣಾನಿಧಿ ಅವರನ್ನು ಗೋಪಾಲಪುರಂನಲ್ಲಿರುವ ಅವರ ನಿವಾಸದಲ್ಲಿ ಶುಕ್ರವಾರ ಎಲ್ಲ ರಾಜಕೀಯ ನಾಯಕರು ಪಕ್ಷ ಭೇದ ಮರೆತು ಭೇಟಿಯಾಗಿದ್ದಾರೆ. ಶ್ರೀಘ್ರ ಗುಣಮುಖರಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು 94ರ ಹರೆಯದ ಕರುಣಾನಿಧಿ ಅವರಿಗೆ ಟ್ವಿಟ್ಟರ್‌ನಲ್ಲಿ ಹಾರೈಸಿದ್ದಾರೆ. ಕರುಣಾನಿಧಿ ಅವರನ್ನು ಹಲವರು ಭೇಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಗೋಪಾಲಪುರಂ ಮನೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಕರುಣಾನಿಧಿ ಅವರು ಕಾವೇರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯೋ ಸಂಬಂಧಿ ಅಸ್ವಸ್ಥತೆಗಳಿಂದ ಕರುಣಾನಿಧಿ ಅವರ ಆರೋಗ್ಯ ಸ್ಪಲ್ಪ ಏರುಪೇರಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ‘‘ಎಂಡಿಎಂಕೆ ವರಿಷ್ಠ ವೈಕೊ, ತಮಿಳುನಾಡು ಬಿಜೆಪಿ ವರಿಷ್ಠ ತಮಿಳಿಸಾ ಸುಂದರರಾಜನ್ ಹಾಗೂ ತಮಿಳಿಸಾ ವಝುರಿಮೈ ಕಚ್ಚಿ ನಾಯಕ ವೇಲು ಮುರುಗನ್ ಮೊದಲಾದವರು ಕರುಣಾನಿಧಿ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬದ ಸದಸ್ಯರು ಹಾಗೂ ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರಲ್ಲಿ ಕರುಣಾನಿಧಿ ಅವರ ಆರೋಗ್ಯದ ಬಗ್ಗೆ ವಿಚಾರಣೆ ನಡೆಸಿದ್ದಾರೆ.’’





