ಗಂಗಾ ನದಿ ನೀರು ಕುಡಿಯಲು ಅನರ್ಹ: ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಅಸಮಾಧಾನ

ಹೊಸದಿಲ್ಲಿ, ಜು. 27: ಉತ್ತರಪ್ರದೇಶದ ಹರಿದ್ವಾರ ಹಾಗೂ ಉನ್ನಾವೊ ನಡುವೆ ಹರಿಯುತ್ತಿರುವ ಗಂಗಾ ನದಿ ನೀರು ಕುಡಿಯಲು, ಸ್ನಾನ ಮಾಡಲು ಸೂಕ್ತವಲ್ಲ ಎಂದು ಹೇಳಿರುವ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ, ಈ ಪರಿಸ್ಥಿತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂಬ ಅರಿವಿಲ್ಲದ ಅಮಾಯಕ ಜನರು ಪವಿತ್ರ ಭಾವನೆಯಿಂದ ಈ ನೀರನ್ನು ಕುಡಿಯಲು ಹಾಗೂ ಸ್ನಾನ ಮಾಡಲು ಬಳಸುತ್ತಾರೆ ಎಂದು ಅದು ಹೇಳಿದೆ. ಈ ನೀರು ಆರೋಗ್ಯಕ್ಕೆ ಹಾನಿಕರ ಎಂದು ಅವರಿಗೆ ಗೊತ್ತಿಲ್ಲ. ಸಿಗರೇಟ್ ಪ್ಯಾಕ್‌ನಲ್ಲಿ ‘ಆರೋಗ್ಯಕ್ಕೆ ಹಾನಿಕರ’ ಎಂಬ ಎಚ್ಚರಿಕೆ ಇರುತ್ತದೆ. ನದಿ ನೀರಿನ ದುಷ್ಪರಿಣಾಮದ ಬಗ್ಗೆ ಜನರಿಗೆ ಯಾಕೆ ಮಾಹಿತಿ ನೀಡುತ್ತಿಲ್ಲ ? ಎಂದು ನ್ಯಾಯಮಂಡಳಿ ಪ್ರಶ್ನಿಸಿದೆ. ‘‘ಗಂಗಾ ನದಿ ನೀರನ್ನು ಬಳಸುವ ವ್ಯಕ್ತಿಯ ಜೀವಿಸುವ ಹಕ್ಕನ್ನು ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯ. ಆದುದರಿಂದ ನೀರಿನ ಗುಣಮಟ್ಟದ ಬಗ್ಗೆ ಅವರು ನೋಟಿಸು ಅಂಟಿಸಬೇಕು’’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಧ್ಯಕ್ಷ ಎ.ಕೆ. ಗೋಯಲ್ ನೇತೃತ್ವದ ಪೀಠ ಹೇಳಿದೆ. ನದಿ ನೀರು ಕುಡಿಯಲು ಹಾಗೂ ಸ್ನಾನ ಮಾಡಲು ಯೋಗ್ಯವೇ ಎಂಬ ಬಗ್ಗೆ 10 ಕಿ.ಮೀ. ಅಂತರದಲ್ಲಿ ಪ್ರದರ್ಶನಾ ಫಲಕ ಸ್ಥಾಪಿಸುವಂತೆ ಗಂಗಾನದಿ ಶುದ್ದೀಕರಣ ರಾಷ್ಟ್ರೀಯ ಕಾರ್ಯಕ್ರಮ (ಎನ್‌ಎಂಸಿಜಿ)ಕ್ಕೆ ಹಸಿರು ನ್ಯಾಯಮಂಡಳಿ ನಿರ್ದೇಶಿಸಿದೆ. ಎಲ್ಲಿಯ ನೀರು ಕುಡಿಯಲು ಹಾಗೂ ಸ್ನಾನ ಮಾಡಲು ಯೋಗ್ಯ ಎಂಬುದನ್ನು ತೋರಿಸುವ ನಕ್ಷೆಯನ್ನು ಜಾಲತಾಣದಲ್ಲಿ ಎರಡು ವಾರಗಳಲ್ಲಿ ಹಾಕುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಎನ್‌ಎಂಸಿಜಿಗೆ ನಿರ್ದೇಶಿಸಿದೆ.





