ಕುತ್ಯಾರಿನ ನರ್ಸ್ ಸೌದಿ ಅರೆಬಿಯಾದಲ್ಲಿ ನಿಗೂಢ ಸಾವು

ಶಿರ್ವ, ಜು.27: ಸೌದಿ ಅರೇಬಿಯಾದ ಸರಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿರ್ವ ಸಮೀಪದ ಕುತ್ಯಾರು ಅಗರ್ದಂಡೆ ನಿವಾಸಿ ಅಶ್ವಿನಿ ಮಥಾಯಸ್ ಎಂಬವರ ಪತ್ನಿ ಜೋತ್ಸ್ನಾ ಕ್ವಾಡರ್ಸ್ (29) ಜು.19 ರಂದು ತಾನು ವಾಸವಾಗಿದ್ದ ಸೌದಿ ಅರೇಬಿಯಾದ ಮಹಿಳೆಯರ ವಸತಿ ನಿಲಯದಲ್ಲಿ ನಿಗೂಢವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಆರೋಗ್ಯವಾಗಿದ್ದ ಜೋತ್ಸ್ನಾ ಅವರ ಅಕಸ್ಮಿಕ ಸಾವಿಗೆ ನಿಖರವಾದ ಕಾರಣ ಈವರೆಗೆ ತಿಳಿದುಬಂದಿಲ್ಲ. ವಸತಿ ನಿಲಯದಲ್ಲಿದ್ದ ಜೋತ್ಸ್ನಾ ಸಂಜೆ ವೇಳೆ ನಿಗೂಢವಾಗಿ ಮೃತಪಟ್ಟಿದ್ದಾರೆ. ಈ ವಿಚಾರವನ್ನು ಎರಡು ದಿನಗಳ ನಂತರ ಆಕೆಯ ಸಹಪಾಠಿಯೊಬ್ಬರು ಊರಿಗೆ ಮಾಹಿತಿ ನೀಡಿದ್ದಾರೆ ಎಂದು ಸಂಬಂಧಿ ಕರು ತಿಳಿಸಿದ್ದಾರೆ.
ಈ ಸಂಬಂಧ ಊರಿನಲ್ಲಿರುವ ಪತಿ ಅಶ್ವಿನಿ ಮಥಾಯಸ್ (34) ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಸಹಕಾರದೊಂದಿಗೆ ಸೌದಿ ಅರೇಬಿ ಯಾದ ರಾಯಭಾರಿ ಕಚೇರಿಯನ್ನು ಪತ್ರ ವ್ಯವಹಾರದ ಮೂಲಕ ಸಂಪರ್ಕಿಸಿದ್ದು, ಪತ್ರ ತಲುಪಿರುವ ಬಗ್ಗೆ ಅಲ್ಲಿಂದ ಮಾಹಿತಿ ಬಂದಿದೆ. ಆದರೆ ಜೋತ್ಸ್ನಾ ಸಾವಿನ ಕುರಿತ ಕಾರಣಗಳ ಬಗ್ಗೆ ಯಾವುದೇ ಮಾಹಿತಿ ಇನ್ನು ಬಂದಿಲ್ಲ.
ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ಇವರಿಗೆ ಮಕ್ಕಳಿಲ್ಲ. ಜೋತ್ಸ್ನಾ ಕಳೆದ ಆರು ವರ್ಷಗಳಿಂದ ಸೌದಿ ಅರೆಬಿಯಾದಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವ ಹಿಸುತ್ತಿದ್ದರು. ದುಬೈಯಲ್ಲಿದ್ದ ಪತಿ ಕಳೆದ ಎರಡು ವರ್ಷಗಳಿಂದ ಊರಿನಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ತನಿಖೆ ನಡೆಯುತ್ತಿದೆ. ಆದರೆ ತನಿಖೆಯ ಪ್ರಗತಿಯ ಕುರಿತು ಯಾವುದೇ ಮಾಹಿತಿ ಇಲ್ಲ. ಸಾವಿನ ಬಗ್ಗೆ ಸಂಶಯ ಇರುವುದರಿಂದ ಮೃತದೇಹ ಊರಿಗೆ ಬರಲು ಇನ್ನು 20 ದಿನಗಳು ಬೇಕಾಗಬಹುದು ಎಂದು ಕುಟುಂಬಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.







