ಸಮಾಜದ ಶಾಂತಿ ಭಂಗ ಮಾಡಿದ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅವಕಾಶವಿಲ್ಲ: ಹೈಕೋರ್ಟ್

ಬೆಂಗಳೂರು, ಜು.27: ಸಮಾಜದ ಶಾಂತಿ ಭಂಗ ಮಾಡಿದ ವ್ಯಕ್ತಿ ವಿರುದ್ಧ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 107 ರನ್ವಯ ಶೋಕಾಸ್ ನೋಟಿಸ್ ನೀಡಿ, ಮ್ಯಾಜಿಸ್ಟ್ರೇಟ್‌ಗೆ ವರದಿ ಕಳುಹಿಸಲು ಅವಕಾಶವಿದೆಯೇ ಹೊರತು, ಎಫ್ಐಆರ್ ದಾಖಲಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಶಾಂತಿಭಂಗ ಆರೋಪದ ಮೇಲೆ ರಾಜಾಜಿನಗರ ಠಾಣಾ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಾಮಾಜಿಕ ಹೋರಾಟಗಾರ್ತಿ ಗೀತಾ ಮಿಶ್ರಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಏಕಸದಸ್ಯಪೀಠವು ಈ ಅಭಿಪ್ರಾಯಪಟ್ಟು ಅರ್ಜಿದಾರರ ವಿರುದ್ಧದ ಎಫ್‌ಐಆರ್ ರದ್ದುಪಡಿಸಿತು.
ಸಮಾಜದ ಶಾಂತಿ ಕದಡಿದ ವ್ಯಕ್ತಿಗಳ ವಿರುದ್ಧ ಪೊಲೀಸರು ಶೋಕಾಸ್ ನೋಟಿಸ್ ನೀಡಬಹುದು ಮತ್ತು ಆ ಬಗ್ಗೆ ಸ್ಥಳೀಯ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅವರಿಗೆ ವರದಿ ಕಳುಹಿಸಿಕೊಡಬಹುದು ಅಷ್ಟೇ. ಸಿಆರ್‌ಪಿಸಿ ಸೆಕ್ಷನ್ 107ರನ್ವಯ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ, ಯಾವ್ಯಾವ ಸಂದರ್ಭಗಳಲ್ಲಿ ಸಿಆರ್‌ಪಿಸಿ ಸೆಕ್ಷನ್ 107 ಬಳಕೆ ಮಾಡಬಹುದು ? ಹಾಗೂ ಹೇಗೆ ಬಳಕೆ ಮಾಡಬೇಕು? ಎಂಬುದರ ಕುರಿತು ಸುತ್ತೋಲೆ ಹೊರಡಿಸುವಂತೆ ರಾಜ್ಯ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ನಗರ ಪೊಲೀಸ್ ಆಯುಕ್ತರಿಗೆ ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿದೆ. ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದಿಸಿದ್ದರು.
ಗೀತಾಮಿಶ್ರಾ ಅವರು ರಾಜಾಜಿನಗರದ 17ನೆ ಮುಖ್ಯರಸ್ತೆ ಹಾಗೂ 47ನೆ ಅಡ್ಡರಸ್ತೆಯಲ್ಲಿ ಪಾದಚಾರಿ ಮಾರ್ಗದ ಮೇಲೆ ಅನಧಿಕೃತವಾಗಿ ಅಂಗಡಿಗಳನ್ನು ಹಾಕಿಕೊಂಡಿದ್ದಾರೆ. ಇದರಿಂದ ಪಾದಚಾರಿ ಮಾರ್ಗ ಒತ್ತುವರಿಯಾಗಿರುವುದಲ್ಲದೆ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ಹೈಕೋರ್ಟ್ ಸಹ ಒತ್ತುವರಿ ತೆರವುಗೊಳಿಸಲು ನಿರ್ದೇಶಿಸಿತ್ತು.
ಇದಾದ ನಂತರ ಅಂಗಡಿ ಮಾಲಕರ ಬೆಂಬಲಿಗರು ಮಿಶ್ರಾ ಅವರ ಮೇಲೆ ದಾಳಿ ನಡೆಸಿದ್ದರಲ್ಲದೆ, ಅವರ ವಿರುದ್ಧವೇ ದೂರು ನೀಡಿದ್ದರು. ಆದರೆ, ಆ ದೂರಿನ ಆರೋಪಗಳು ಸುಳ್ಳಿನಿಂದ ಕೂಡಿದೆ ಎಂದು ತಿಳಿಸಿದ್ದ ಪೊಲೀಸರು ದೂರು ವಜಾಗೊಳಿಸಿದ್ದರು. ತದನಂತರ ಬೀದಿ ವ್ಯಾಪಾರಿಗಳಿಗೆ ಗೀತಾ ಮಿಶ್ರಾ ಬೆದರಿಕೆ ಹಾಕಿ ನಿಂದಿಸುತ್ತಿದ್ದಾರೆ ಎಂಬ ಆರೋಪ ಸಂಬಂಧ ರಾಜಾಜಿನಗರ ಪೊಲೀಸ್ ಇನ್ಸ್‌ಪೆಕ್ಟರ್ ಮಂಜು ಅವರು, ಮಿಶ್ರಾ ವಿರುದ್ಧವೇ ಶಾಂತಿಭಂಗ ಆರೋಪದ ಮೇಲೆ ಸಿಆರ್‌ಪಿಸಿ ಸೆಕ್ಷನ್ 107ರಡಿ ಎಫ್‌ಐಆರ್ ದಾಖಲಿಸಿದ್ದರು.







