ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಿದರೆ ಮಠಾಧೀಶರಿಂದ ಉ.ಕ ಪ್ರತ್ಯೇಕಕ್ಕೆ ಬೆಂಬಲ: ದಿಂಗಾಲೇಶ್ವರ ಸ್ವಾಮೀಜಿ

ದಾವಣಗೆರೆ,ಜು.27: ಗುರುಗಳು ಎಲ್ಲರಿಗಿಂತ ದೊಡ್ಡವರು ಎಂದು ಇತಿಹಾಸದಲ್ಲೂ ಗುರುತಿಸಲ್ಪಟ್ಟಿದೆ. ಹಾಗಾಗಿ, ಸದಾಕಾಲ ಗುರುವಿನ ಅನುಕರಣೆ, ಸ್ಮರಣೆ ಅವಶ್ಯ ಎಂದು ಬಾಲೆಹೊಸೂರು ಸುಕ್ಷೇತ್ರದ ದಿಂಗಾಲೇಶ್ವರ ಶ್ರೀಗಳು ತಿಳಿಸಿದರು.
ನಗರದ ಎಂಸಿಸಿ ಬ್ಲಾಕ್‍ನ ತೊಗಟಿವೀರ ಕಲ್ಯಾಣಮಂಟಪದಲ್ಲಿ ಶ್ರೀ ಶಿರಡಿ ಸಾಯಿಬಾಬಾರವರ ಪ್ರಥಮ ವರ್ಷದ ಗುರುಪೂರ್ಣಿಮಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಭಕ್ತನಾದವನು ಜೀವನದಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದರೂ ಗುರುವಾದವನು ‘ಹರ ಮುನಿದರು ಗುರು ಕಾಯುವ’ ಎಂಬಂತೆ ಅದನ್ನು ತೊಳೆಯುವ ಮೂಲಕ ಸಚ್ಚಾರಿತ್ರ್ಯ ಜೀವನಕ್ಕೆ ದಾರಿ ಮಾಡಿಕೊಡುತ್ತಾನೆ. ಇದುವೆ ಹರ, ಗುರುವಿಗೆ ಇರುವ ವ್ಯತ್ಯಾಸ ಎಂದು ಅವರು ವಿವರಿಸಿದ ಅವರು, ಭಾರತ ದೇಶ ಆಧ್ಯಾತ್ಮಿಕತೆಯ ತವರೂರು. ಇಲ್ಲಿನ ಶರಣರ, ಮಹಾತ್ಮರ, ಋಷಿಮುನಿಗಳ, ಗುರುಗಳ ಮಾತುಗಳೇ ವಿಜ್ಞಾನಕ್ಕೆ ಮೂಲ ಆಧಾರ. ಹಾಗಾಗಿ, ಅನೇಕ ನಂಬಿಕೆ, ಮೂಡನಂಬಿಕೆಗಳಲ್ಲಿ ಹಲವಾರು ವೈಜ್ಞಾನಿಕತೆ ಇದೆ ಎಂದ ಅವರು, ಮನಸ್ಸಿನ ಸೀಮಿತತೆ ಕಾಪಾಡಿಕೊಳ್ಳಲು ಪ್ರಾರ್ಥನೆ, ಧ್ಯಾನ, ಏಕಾಂತ ಅತ್ಯಗತ್ಯ. ಇವುಗಳ ಮೂಲಕ ಮನಸ್ಸಿನ ಸೀಮಿತತೆ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಜಗತ್ತಲ್ಲಿರುವುದೆಲ್ಲವೂ ಆ ದೇವರದ್ದೇ. ಆದ್ದರಿಂದ ದೇವರ ಧ್ಯಾನಕ್ಕೆ ನೀವು ಕೊಡುವ ವಸ್ತುಗಳಿಂದ ದೇವರು ಎಂದಿಗೂ ಸಂತುಷ್ಟನಾಗಲಾರ. ಆತ ಬಯಸುವುದು ನಿಮ್ಮ ಏಕಾಗ್ರತೆ ಮನಸ್ಸನ್ನು ಮಾತ್ರ. ಆದ್ದರಿಂದ ಒಂದು ತಾಸು, ಒಂದು ನಿಮಿಷ ಧ್ಯಾನಕ್ಕಿಂತ ಎಷ್ಟೊತ್ತು ಶುದ್ಧ ಮನಸ್ಸನ್ನು ದೇವರ ಸ್ಮರಣೆಗೆ ನೀಡಿರುತ್ತೀರಿ ಎಂಬುದಷ್ಟೇ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಶಿರಡಿ ಸಾಹಿಬಾಬ ಸೇವಾ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಶಿವಮೂರ್ತಿ ಇಟ್ಟಿಗುಡಿ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ಗೌಡ್ರ ರಾಜಶೇಖರ್, ಅಶ್ವಿನಿಪ್ರಶಾಂತ್, ಸರ್ಪರಾಜ್ ಆಲಿಖಾನ್, ಶಿವಯೋಗಿಸ್ವಾಮಿ ಜೆ.ಎಸ್., ಸೂರಜ್, ಚಿದಾನಂದರಾಯ್ಕರ್, ನಿರ್ಮಾಲಾ ಜೆ.ಎಸ್., ನಿರ್ಮಲಾ, ಸುನೀತಾಸಿಂಗ್, ಜ್ಯೋರಿ ಮತ್ತಿತರರಿದ್ದರು. ಕೆ.ಸಿ. ನಿಂಗರಾಜು ಸ್ವಾಗತಿಸಿದರು. ಜಿನದತ್ತ ಎಸ್.ಬಿ. ನಿರೂಪಿಸಿ, ಪ್ರಾಸ್ಥಾವಿಕ ಮಾತನಾಡಿದರು.
ಉತ್ತರಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿ. ಇಲ್ಲವೇ, ಮೈಸೂರು, ತುಮಕೂರು, ಬೆಂಗಳೂರು, ಹಾಸನದ ಮಾದರಿಯಲ್ಲೇ ಉತ್ತರಕರ್ನಾಟಕವನ್ನೂ ಅಭಿವೃದ್ಧಿಪಡಿಸಲಿ ಎಂದು ಗದಗ ಜಿಲ್ಲೆಯ ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮಿಗಳು ಆಗ್ರಹಿಸಿದರು.
ನಗರದಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬರುವ ಮುನ್ನಾ ರಾಜ್ಯದ ಜನತೆಗೆ ಅನೇಕ ಆಶ್ವಾಸನೆ ನೀಡಿದ್ದರು. ಅದರೆ, ಸಿಎಂ ಆದ ನಂತರ ತಮ್ಮ ಆಶ್ವಾಸನೆಗಳನ್ನು ಮರೆತಂತಿದ್ದು, ಉತ್ತರ ಕರ್ನಾಟಕವನ್ನು ಕೇವಲ ಬಳಕೆಯ ಕರ್ನಾಟಕವನ್ನಾಗಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಭಿವೃದ್ಧಿ ವಿಚಾರದಲ್ಲಿ ಉ.ಕ ವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಆದ್ದರಿಂದ ಈ ಭಾಗದ ಜನತೆ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಿದ್ದೇ ಆದಲ್ಲಿ ಈ ಭಾಗದ ಎಲ್ಲಾ ಮಠಾಧೀಶರು ಸೇರಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ಮಾಡುವುದಕ್ಕೆ ಬೆಂಬಲ ನೀಡುತ್ತೇವೆ ಎಂದು ದಿಂಗಾಲೇಶ್ವರ ಸ್ವಾಮಿಗಳು ಘೋಷಿಸಿದರು.







