ಜಾತಿ, ಆಸ್ತಿಯ ಮೇಲೆ ಸಮಾಜವನ್ನು ಕಟ್ಟುವುದು ಆದರ್ಶವಲ್ಲ: ಮುರುಘಾ ಶ್ರೀ

ದಾವಣಗೆರೆ,ಜು.27: ಜಾತಿ, ಆಸ್ತಿಯ ಮೇಲೆ ಸಮಾಜವನ್ನು ಕಟ್ಟುವುದು ಆದರ್ಶವಲ್ಲ. 12ನೇ ಶತಮಾನದಲ್ಲಿ ಬಸವಣ್ಣನವರು ಆದರ್ಶಗಳ ಮೇಲೆ ಸಮಾಜವನ್ನು ಕಟ್ಟಿದ್ದರು. ಅಂತಹ ಆದರ್ಶದ ಸಮಾಜ ನಮ್ಮದಾಗಬೇಕು ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶುಕ್ರವಾರ ನಗರದ ಶಿವಯೋಗಿ ಆಶ್ರಮದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪಾಲಿಕೆ ಹಾಗೂ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ, ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಹಡಪದ ಸಮಾಜವೆಂದರೆ ತುಂಬಾ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮಾಜ. ಇಂತಹ ಸಮಾಜಕ್ಕೂ 12ನೇ ಶತಮಾನದಲ್ಲಿ ಬಸವಣ್ಣ ಸ್ವಾಭಿಮಾನ ತುಂಬಿದ್ದರು. ಹಡಪದ ಅಪ್ಪಣ್ಣ ಅವರನ್ನು ಬಸವಣ್ಣ ಗುರುತಿಸಿದ್ದರು. ಕೆಲವರು ಜಾತಿಯ ಮೇಲೆ ಸಮಾಜ ಕಟ್ಟಲು ಹವಣಿಸುತ್ತಾರೆ. ಜಾತಿ ದೃಷ್ಟಿ ಮತೀಯ, ಸಂಕುಚಿತ ಹಾಗೂ ಸೀಮಿತವಾಗಿರುವ ದೃಷ್ಟಿ. ಇಂತಹ ಸಂಕುಚಿತ ಮತೀಯವನ್ನಿಟ್ಟುಕೊಂಡು ವಿಶಾಲವಾದ, ಜಾಗತೀಕವಾಗಿರುವಂತಹ, ವಿಸ್ತೃತವಾದ ಸಮಾಜ ಕಟ್ಟಲು ಸಾಧ್ಯವಿಲ್ಲ. ಆದರೂ ಅಂತಹ ಪ್ರಯತ್ನ ನಡೆಯುತ್ತಲೆ ಇವೆ ಎಂದರು.
ಕರ್ನಾಟಕಾದ್ಯಂತ ಪ್ರಪ್ರಥಮ ಬಾರಿಗೆ ಹಡಪದ ಅಪ್ಪಣ್ಣ ಜಯಂತಿ ಸರ್ಕಾರ ಆಚರಿಸುತ್ತಿರುವುದು ಶ್ಲಾಘನೀಯ ಎಂದ ಅವರು, ಜಾತಿಯ ಮೇಲೆ ಸಮಾಜ ಕಟ್ಟುವುದು ನಮಗೆ ಆದರ್ಶವಲ್ಲ. ಆಸ್ತಿಯ ಮೇಲೆ ಸಮುದಾಯ ಕಟ್ಟುವುದು ಆದರ್ಶವಲ್ಲ. ನಮ್ಮ ಎಲ್ಲಾ ಕಾಲಕ್ಕೂ ಉಳಿಯುವ ಆದರ್ಶ ಯಾವುದು ಎಂಬ ಬಗ್ಗೆ ಬಸವಣ್ಣನವರಿಗೆ ಅಧ್ಯಯನ ಅನುಭವವಿತ್ತು. ಅವರು ಆದರ್ಶಗಳ ಮೇಲೆ ಸಮಾಜ ಕಟ್ಟಿದ್ದರು. ಜಾಗತೀಕವಾದಂತ ಇತಿಹಾಸದಲ್ಲಿ ಆದರ್ಶವಾದ ಸಮಾಜ ಕಟ್ಟಿದ ಉದಾಹರಣೆ ಇದ್ದರೆ ಅದು 12ನೇ ಶತಮಾನದಲ್ಲಿ ಬಸವಣ್ಣನವರ ಕಾಲದಲ್ಲಿ. ಬಸವಣ್ಣನವರ ಸಮಗ್ರ ದೃಷ್ಟಿಯಲ್ಲಿ ಹಡಪದ ಅಪ್ಪಣ್ಣನವರು ಸೇರಿದ್ದಾರೆ. ಅವರನ್ನು ಬಸವಣ್ಣನವರಿಂದ ದೂರ ಮಾಡಲು ಸಾಧ್ಯವಿಲ್ಲ. ಇವರಿಬ್ಬರ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ಎಂದಿಗೂ ಬಿಡಲಾರದಂತಹ ಸಂಬಂಧ ಅದು. ಆ ಸಂಬಂಧದ ಕೊಂಡಿ ಎಂದಿಗೂ ಕಳಚುವುದಿಲ್ಲ. ಹಾಗೂ ಕಳಚದಂತೆ ನಾವು ನೋಡಿಕೊಳ್ಳಬೇಕಿದೆ ಎಂದರು.
ಬಸವಣ್ಣನ ಸಮಾಜ ಅಪ್ಪಣ್ಣನ ಸಮಾಜ. ಅಂದರೆ ಅಪ್ಪಿಕೊಳ್ಳುವ ಸಮಾಜ. ಇಂತಹ ಉದಾತ್ತವಾದ ಸಂಬಂಧ ನಮ್ಮ ಶರಣ ಸಂಬಂಧ. ಆದರ್ಶಗಳ, ಸೈದ್ದಾಂತಿಕ,ವೈಚಾರಕತೆಯ ತಳಹದಿಯ ಮೇಲೆ ಬಸವಾದಿ ಶರಣರು ಒಂದು ಅಪೂರ್ವವಾದ ಸಮಾಜವನ್ನು, ಮೌಲಿಕವಾದ ಸಮಾಜ ನಮಗೆ ಕಟ್ಟಿಕೊಟ್ಟು ಹೋಗಿದ್ದಾರೆ. ಆ ದೃಷ್ಟಿಯಲ್ಲಿ 21ನೇ ಶತಮಾನದಲ್ಲಿರುವ ಎಲ್ಲರು ಬಸವಣ್ಣನವರ ಆದರ್ಶದಂತೆ ನಡೆದುಕೊಳ್ಳಬೇಕು. ಎಲ್ಲಾ ಜಾತಿಗಳು ಅನುಭವ ಮುಖಾಂತರ ಅಂದು ಒಗ್ಗೂಡಿದ್ದವು ಎಂದರು.
ಕೆಲವರು ಮುರುಘಾ ಮಠದ ಸ್ವಾಮೀಜಿ ಜಾತಿಗೊಬ್ಬ ಸ್ವಾಮೀಜಿ ಮಾಡುತ್ತಿದ್ದಾರೆಂದು ಹೇಳುತ್ತಿದ್ದಾರೆ. ಆದರೆ, 18 ಜಾತಿಗಳು ಕೂಡ ಬೆಂಗಳೂರಿನ ವಿಧಾನಸೌಧದ ಮುಂದೆ ದೊಡ್ಡ ಕಾರ್ಯಕ್ರಮ ಮಾಡುವ ಅವಕಾಶ ಸಿಕ್ಕಿದೆ ಎಂದು ಹೇಳಿದರು.
ಈ ಸಂದರ್ಭ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಎಸ್ಪಿ ಆರ್.ಚೇತನ್, ತಹಶೀಲ್ದಾರ್ ಸಂತೋಷ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಮಹಾಂತದೇವರು, ಡಾ.ಹೆಚ್.ವಿಶ್ವನಾಥ್, ಬಸವಂತಪ್ಪ, ಮರುಳಸಿದ್ದಪ್ಪ, ಬಸವರಾಜ್, ಶಶಿಧರ್, ವೀರಭದ್ರಪ್ಪ, ವಿಜಯಕುಮಾರ್ ಇತರರು ಇದ್ದರು.
ಚಂದ್ರಗ್ರಹಣ ಸೌರಮಂಡಲದಲ್ಲಿ ನಡೆಯುವ ಸ್ವಾಭಾವಿಕ ಪ್ರಕ್ರಿಯೆ. ಇದು 21ನೇ ಶತಮಾನದ ಅಪೂರ್ವ ಕ್ಷಣ. ಇದನ್ನು ಎಲ್ಲರು ಕಣ್ತುಂಬಿಕೊಳ್ಳಬೇಕು. ಎಲ್ಲರು ಗ್ರಹಣ ನೋಡಿ ಖುಷಿ ಪಡಬೇಕು ಎಂದು ಅವರು ತಿಳಿಸಿದರು.
ಚಂದ್ರಗ್ರಹಣದ ಬಗ್ಗೆ ಜ್ಯೋತಿಷಿಗಳು ಏನೇನೋ ಹೇಳುತ್ತಾರೆ. ನಿಮ್ಮನ್ನು ಭಯಗೊಳಿಸುತ್ತಾರೆ. ಆದರೆ, ಜನತೆ ಯಾರೂ ಚಂದ್ರಗ್ರಹಣಕ್ಕೆ ಭಯಪಡಬೇಕಿಲ್ಲ. ಗ್ರಹಣದ ವೇಳೆ ಶುಭ ಕೆಲಸಗಳನ್ನು ಮಾಡಬಹುದು. ಈ ಹಿನ್ನಲೆಯಲ್ಲಿ ರಾತ್ರಿ ಚಿತ್ರದುರ್ಗದ ಮುರಘಾ ಮಠದಲ್ಲಿ ದೀಕ್ಷೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಲ್ಲದೆ, ಕಲ್ಯಾಣ ಮಹೋತ್ಸವನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.







