ಕರ್ನಾಟಕದ ರಾಜಕಾರಣಿಗಳನ್ನು ಆವರಿಸಿದ ಚಂದ್ರಗ್ರಹಣ

ಬೆಂಗಳೂರು, ಜು. 27: ಚಂದ್ರಗ್ರಹಣ ಸಂಭವಿಸಿದ ಶುಕ್ರವಾರ ಕರ್ನಾಟಕದ ಎಲ್ಲ ರಾಜಕಾರಣಿಗಳು ಆತಂಕಪಟ್ಟುಕೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಇತರ ಸಣ್ಣ ಪಕ್ಷಗಳು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಇಂದು ಮನೆಯಿಂದ ಹೊರಗಿಳಿಯಲಿಲ್ಲ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಅವರ ಪುತ್ರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪಿಡಬ್ಲುಡಿ ಸಚಿವ ಎಚ್.ಡಿ. ರೇವಣ್ಣ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿ ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಮರಳಿದರು. ಮೂವರು ಕೂಡ ಯಾವುದೇ ರಾಜಕೀಯ ಸಭೆಗೆ ಹಾಜರಾಗಿಲ್ಲ. ರೇವಣ್ಣ ಹಾಗೂ ದೇವೇಗೌಡ ಮನೆಯಲ್ಲೇ ಉಳಿದರು. ಕುಮಾರಸ್ವಾಮಿ ತುಮಕೂರಿಗೆ ತೆರಳಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಹಿರಿಯ ಸಹೋದರನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಂದ್ರಗ್ರಹಣಕ್ಕಿಂತ ಒಂದು ದಿನ ಮುನ್ನ ಜಿಂದಾಲ್ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಉಂಟಾಗುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಡಿ ಎಂದು ಯಡಿಯೂರಪ್ಪ ತನ್ನ ಪಕ್ಷದ ಸದಸ್ಯರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಬೆಂಗಳೂರಿನ ಕ್ವೀನ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಶುಕ್ರವಾರ ಮುಚ್ಚಿತ್ತು. ವಿಧಾನ ಸೌಧ ನಿರ್ಜನವಾಗಿತ್ತು. ಒಬ್ಬರೇ ಒಬ್ಬ ಶಾಸಕ ಕಂಡು ಬರಲಿಲ್ಲ. ವಿಧಾನ ಸೌಧದ ಕಾರು ನಿಲುಗಡೆ ಪ್ರದೇಶದಲ್ಲಿ ಒಂದೇ ಒಂದು ವಾಹನ ಇರಲಿಲ್ಲ. ಜೆಡಿಎಸ್ ನಾಯಕ ಹಾಗೂ ಸಂಪುಟ ಸಚಿವ ಜಿ.ಟಿ. ದೇವೇಗೌಡ ತಾನು ಮೂಡನಂಬಿಕೆ ವಿರೋಧಿಸುತ್ತೇನೆ. ನಾನು ಜ್ಯೋತಿಷ್ಯ ನಂಬುವುದಿಲ್ಲ ಎಂದು ಹೇಳಿದ್ದಾರೆ. ಬಸವ ತತ್ವದಲ್ಲಿ ನಂಬಿಕೆ ಇರಿಸಿರುವ ಸಿದ್ದರಾಮಯ್ಯ ಕೂಡ ಅಂತಹ ನಂಬಿಕೆ ಇಲ್ಲ ಎಂದು ತಿಳಿಸಿದ್ದಾರೆ.







