ಭೀಕರ ರಸ್ತೆ ಅಪಘಾತ: ಮೂವರು ಕೂಲಿ ಕಾರ್ಮಿಕರು ಮೃತ್ಯು

ಯಾದಗಿರಿ, ಜು. 28: ಇಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಶರವೇಗದಲ್ಲಿ ಸಾಗುತ್ತಿದ್ದ ಬೊಲೆರೋ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 3 ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲೆ ಅಸುನೀಗಿದ ಘಟನೆ ಶನಿವಾರ ನಡೆದಿದೆ.
ಮೃತ ಕೂಲಿ ಕಾರ್ಮಿಕರನ್ನು ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದ ಅಯ್ಯಪ್ಪ ಸಂಗಣ್ಣ (21), ಅಂಬರೀಶ್ ಸಂಗಣ್ಣ (19) ಹಾಗೂ ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ನಿವಾಸಿ ರವಿಚಂದ್ರ (21) ಎಂದು ಗುರುತಿಸಲಾಗಿದೆ.
ಗಾರೆ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಬೈಕ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಬೊಲೆರೋ ವಾಹನ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ 3 ಮಂದಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಪರಾರಿಯಾಗಲು ಯತ್ನಿಸುತ್ತಿದ್ದ ಅಪಘಾತಕ್ಕೆ ಕಾರಣವಾದ ಬೊಲೆರೋ ವಾಹನ ಚಾಲಕನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಗೆ ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ಳಾಳ್, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ಯಾದಗಿರಿ ಗ್ರಾಮೀಣ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.





