ಒಂದೇ ದಿನದಲ್ಲಿ ಸಿಕ್ಕಿಬಿದ್ದ ಕೊಲೆಗಾರರು !

ಬೆಂಗಳೂರು, ಜು.28: ಪತ್ನಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯ ಕೊಲೆಗೆ ಸುಪಾರಿ ನೀಡಿದ್ದ ಆರೋಪಿ ಹಾಗೂ ಕೊಲೆಗೆ ಯತ್ನ ನಡೆಸಿದ ಮೂವರನ್ನು ಇಲ್ಲಿನ ಹುಳಿಮಾವು ಠಾಣಾ ಪೊಲೀಸರು ಒಂದೇ ದಿನದಲ್ಲೇ ಸೆರೆಹಿಡಿದಿದ್ದಾರೆ.
ಆನೇಕಲ್ ತಾಲೂಕಿನ ಜಿಗಣಿಹೋಬಳಿ ಕೆಂಪನಾಯಕನಹಳ್ಳಿಯ ಮಣಿ ಕೊಂಗ(30), ಜೆಪಿ ನಗರದ 8ನೆ ಹಂತದ ಸುರಬಿನಗರದ ರೂಪೇಶ(33), ಮೈಲಸಂದ್ರದ ಸೆಲ್ವರಾಜು(33) ಹಾಗೂ ಕೊಲೆಗೆ ಸುಪಾರಿ ನೀಡಿದ್ದ ಸಿದ್ದಾಪುರದ ಗುಟ್ಟೆಪಾಳ್ಯದ ಲಕ್ಷಣ(38) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಿದ್ದಾಪುರದ ಗುಟ್ಟೇಪಾಳ್ಯದಲ್ಲಿ ದರ್ಶನ್ ಪೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಲಕ್ಷ್ಮಣ 10 ವರ್ಷದ ಹಿಂದೆ ಮದುವೆಯಾಗಿದ್ದ. ಈತನ ಪತ್ನಿ ಅರಕೆರೆ ಬೀಡಾ ಅಂಗಡಿ ಮಾಲಕನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ಬೇರೆ ವಾಸವಾಗಿದ್ದಳು. ಇದೇ ಕೊರಗಿನಲ್ಲಿ ಆರೋಪಿಯ ತಾಯಿ ಮೃತಪಟ್ಟಿದ್ದಳು. ನನ್ನ ಸಂಸಾರ ಹಾಳಾಗುವುದಕ್ಕೆ ಶಿವಕುಮಾರನೇ ಕಾರಣವೆಂದು ಕೊಲೆ ಮಾಡಿ ಸೇಡು ತೀರಿಸಿಕೊಳ್ಳೋಣವೆಂದು ಸಂಚು ರೂಪಿಸಿದ್ದ. ಅದಕ್ಕಾಗಿ 3 ಲಕ್ಷ ರೂ.ಗಳಿಗೆ ಸುಪಾರಿ ಕೊಟ್ಟು ಶಿವಕುಮಾರನ ಎಲ್ಲ ವಿವರಗಳನ್ನು ನೀಡಿ ಮುಂಗಡ 7 ಸಾವಿರ ರೂ.ನಗದು ಹಣ ನೀಡಿದ್ದಾನೆ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಕ್ಯಾಬ್ ಚಾಲಕ ಪೆದ್ದಣ್ಣ ಎಂಬುವರು ವೈಟ್‌ಫಿಲ್ಡ್‌ನಲ್ಲಿರುವ ಖಾಸಗಿ ಕಂಪೆನಿಯ ನೌಕರರನ್ನು ಪ್ರತಿನಿತ್ಯ ಕರೆದುಕೊಂಡು ಹೋಗುತ್ತಾರೆ. ಅದೇ ರೀತಿ, ಜು.25 ರಂದು ರಾತ್ರಿ 11 ಗಂಟೆಗೆ ವೇಳೆಗೆ ಕಾರಿನಲ್ಲಿ ನೌಕರರನ್ನು ಮನೆ ಮನೆಗೆ ಬಿಟ್ಟು ತನ್ನ ಮನೆಕಡೆಗೆ ಹೊರಟಿದ್ದಾನೆ. ಆಗ ರಸ್ತೆ ಮಧ್ಯ ಪೊದೆಯಲ್ಲಿ ಅವಿತು ಕುಳಿತಿದ್ದ ಮೂವರು ಕಾರು ನಿಲ್ಲಿಸಿ ಮಾರಕಾಸಗಳನ್ನು ತೋರಿಸಿ ಬೆದರಿಸಿ ಕಾರು ಕಿತ್ತುಕೊಂಡು ಹೋಗಿದ್ದಾರೆ. ಈ ಕುರಿತು ಚಾಲಕ ಜು.26 ರಂದು ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ವಿಶೇಷ ತಂಡ ರಚಿಸಿದ್ದರು. ಮಾರಕಾಸ್ತ್ರಗಳನ್ನು ಕಾರಿನಲ್ಲಿ ಇಟ್ಟುಕೊಂಡು ತಲಘಟ್ಟಪುರ ನೈಸ್ ರಸ್ತೆಬಳಿ ಹೊಗುತ್ತಿರುವಾಗ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ







