ಪಾಕ್ ಚುನಾವಣೆಯಲ್ಲಿ ಸೇನೆ ಹಸ್ತಕ್ಷೇಪ: ಅಮೆರಿಕ ಕಳವಳ

ವಾಶಿಂಗ್ಟನ್, ಜು. 28: ಪಾಕಿಸ್ತಾನದಲ್ಲಿ ನಡೆದ ಚುನಾವಣೆ ಹಾಗೂ ಚುನಾವಣಾ ಪ್ರಕ್ರಿಯೆ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ.
ಚುನಾವಣೆಯ ಮೊದಲು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪಾಕಿಸ್ತಾನದ ಅಧಿಕಾರಿಗಳು ಹೇರಿರುವ ನಿರ್ಬಂಧಗಳು ಹಾಗೂ ಅಧಿಕಾರಿಗಳು ನಿರ್ದಿಷ್ಟ ಪಕ್ಷದ ಬಗ್ಗೆ ತೋರಿದ ಒಲವುಗಳು ಮುಕ್ತ, ನ್ಯಾಯೋಚಿತ ಹಾಗೂ ಪಾರದರ್ಶಕ ಚುನಾವಣೆಗೆ ಹೊಂದಿಕೆಯಾಗುವುದಿಲ್ಲ ಎಂದು ಎಂದು ಅದು ಹೇಳಿದೆ.
ಬುಧವಾರ ನಡೆದ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ)ಪಕ್ಷ ವಿಜಯಿಯಾಗಿದೆ ಎಂಬುದಾಗಿ ಪಾಕಿಸ್ತಾನ ಚುನಾವಣಾ ಆಯೋಗ ಘೋಷಿಸಿದೆ.
ಅದೇ ವೇಳೆ, ಈ ಚುನಾವಣೆಯಲ್ಲಿ ಪಾಕಿಸ್ತಾನದ ಬಲಿಷ್ಠ ಸೇನೆ ಭಾರೀ ಪ್ರಮಾಣದಲ್ಲಿ ಹಸ್ತಕ್ಷೇಪ ನಡೆಸಿದೆ ಎಂಬುದಾಗಿ ದಕ್ಷಿಣ ಏಶ್ಯ ಪರಿಣತರು ಹಾಗೂ ಪಾಕಿಸ್ತಾನಿ ವೀಕ್ಷಕರು ಕಳವಳ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ.
ಆಡಳಿತ ನಡೆಸುವ ಪ್ರಜಾಸತ್ತಾತ್ಮಕ ಹಾಗೂ ನಾಗರಿಕ ಸಂಸ್ಥೆಗಳನ್ನು ಬೆಳೆಸುವುದು ಮತ್ತು ಬಲಪಡಿಸುವುದು ಪಾಕಿಸ್ತಾನದ ದೀರ್ಘಾವಧಿ ಸ್ಥಿರತೆ ಮತ್ತು ಸಮೃದ್ಧಿಗೆ ಅಗತ್ಯವಾಗಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರೆ ಹೆದರ್ ನೋವರ್ಟ್ ಅಮೆರಿಕದ ಮೊದಲ ಅಧಿಕೃತ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.
*ಹೊಸ ಚುನಾವಣೆಗೆ ಒತ್ತಾಯಿಸಿ ಪಕ್ಷಗಳ ಪ್ರತಿಭಟನೆ
ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಪಾಕಿಸ್ತಾನಿ ರಾಜಕೀಯ ಪಕ್ಷಗಳ ಗುಂಪೊಂದು, ಹೊಸದಾಗಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುವುದಾಗಿ ಶುಕ್ರವಾರ ಘೋಷಿಸಿದೆ.
‘‘ಮರು ಚುನಾವಣೆ ನಡೆಸುವಂತೆ ಕೋರಿ ನಾವು ಚಳವಳಿಯೊಂದನ್ನು ಆರಂಭಿಸುತ್ತೇವೆ’’ ಎಂದು ಆಲ್ ಪಾರ್ಟೀಸ್ ಕಾನ್ಫರೆನ್ಸ್‌ನ ಮೌಲಾನಾ ಫಝಲುರ್ ರಹಮಾನ್ ಹೇಳಿದರು.
ಈ ಗುಂಪಿನಲ್ಲಿ ನಿರ್ಗಮನ ಆಡಳಿತಾರೂಢ ಪಕ್ಷ ಪಾಕಿಸ್ತಾನ್ ಮುಸ್ಲಿಮ್ ಲೀಗ್- ನವಾಝ್ (ಪಿಎಂಎಲ್-ಎನ್) ಸೇರಿದೆ.







