ಕಾಪು: ನಮ್ಮ ಮಕ್ಕಳು ನಮ್ಮವರಾಗಲು ಜನ ಜಾಗೃತಿ

ಕಾಪು, ಜು. 28 : ಇತ್ತೀಚಿನ ದಿನಗಳಲ್ಲಿ ಯುವಸಮುದಾಯ ಮದ್ಯ, ಮಾದಕ ಮತ್ತು ಭ್ರಷ್ಟಾಚಾರದಂತಹ ವ್ಯಸನಗಳಿಂದ ಬಲಿಯಾಗುತಿದ್ದು, ಈ ನಿಟ್ಟಿನಲ್ಲಿ ಪ್ರತಿಯೋರ್ವ ಪ್ರಜೆಯೂ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಎಸ್ಸೆಸ್ಸೆಫ್‌ನ ಉಡುಪಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮಹಮ್ಮದ್ ರಕೀಬ್ ಕನ್ನಂಗಾರ್ ಹೇಳಿದರು.
ಎಸ್ಸೆಸ್ಸೆಫ್ ಉಚ್ಚಿಲ ಹಾಗೂ ಶಿರ್ವ ಸೆಕ್ಟರ್‌ನ ಜಂಟಿ ಆಶ್ರಯದಲ್ಲಿ ಶನಿವಾರ ಉಚ್ಚಿಲ ಪೇಟೆಯಿಂದ ಕಾಪುವಿನವರೆಗೆ ಹಮ್ಮಿಕೊಳ್ಳಲಾಗಿದ್ದ ನಮ್ಮ ಮಕ್ಕಳು ನಮ್ಮವರಾಗಲು ಜನ ಜಾಗೃತಿ ಅಭಿಯಾನದ ಬಳಿಕ ಕಾಪು ಪೇಟೆಯಲ್ಲಿ ನಡೆದ ಸಮಾರೋಪ ಸಮಾರಂದಲ್ಲಿ ಅವರು ಮಾತನಾಡಿದರು.
ಸಮೃದ್ಧ ಭಾರತ ನಿರ್ಮಾಣ ನಮ್ಮೆಲ್ಲರ ಮುಖ್ಯ ಗುರಿಯಾಗಬೇಕಿದ್ದು, ಅದಕ್ಕಾಗಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲಿ ಅಹಿಂಸಾತ್ಮಕ ರೀತಿಯ ಚಳವಳಿಗಳು ನಡೆಯಬೇಕಿವೆ. ಪರಸ್ಪರ ಸೌಹಾರ್ದತೆ, ಪ್ರೀತಿ, ವಿಶ್ವಾಸಗಳಿಮದ ಕೂಡಿದ ಬದುಕು ನಮ್ಮದಾಗಬೇಕಿದೆ ಎಂದು ಅವರು ಹೇಳಿದರು.
ಉಚ್ಚಿಲ ಪೇಟೆಯಲ್ಲಿ ಬೀದಿ ಭಾಷಣದೊಂದಿಗೆ ಪ್ರಾರಂಭವಾದ ಅಭಿಯಾನವು ಉಚ್ಚಿಲ ಪೇಟೆಯಿಂದ ಕಾಪು ವಿದ್ಯಾನಿಕೇತನ ಶಾಲೆಯವರೆಗೆ ಬೈಕ್ ಮೂಲಕ ಸಾಗಿ ಬಂದು, ಅಲ್ಲಿಂದ ಕಾಪು ಪೇಟೆಯವರೆಗೆ ಕಾಲ್ನಡಿಗೆ ಜಾಥಾದ ಮೂಲಕ ಬಂದು ಕಾಪು ಪೇಟೆಯಲ್ಲಿ ಸಮಾಪನಗೊಂಡಿತು.
ಎಸ್ಸೆಸ್ಸೆಫ್ ಕಾಪು ಸೆಕ್ಟಟರ್ ಅಧ್ಯಕ್ಷ ಮಜೀದ್ ಹನೀಫಿ ಕಾಪು ಅಧ್ಯಕ್ಷತೆ ವಹಿಸಿದ್ದರು. ಕಾಪು ಡಿವಿಜನ್ ಅಧ್ಯಕ್ಷ ಮುಹಿಯದ್ದೀನ್ ಸಖಾಫಿ, ಎಸ್.ಜೆ.ಎಂ. ಕಾಪು ರೇಂಜ್ ಅಧ್ಯಕ್ಷ ಅಬ್ದುರ್ರಶೀದ್ ಸಖಾಫಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಶಬೀರ್ ಸಖಾಫಿ, ಉಚ್ಚಿಲ ಸೆಕ್ಟರ್ ಉಸ್ತುವಾರಿ ಶಾಹುಲ್ ಹಮೀದ್ ನಈಮಿ, ಶಿರ್ವ ಸೆಕ್ಟರ್ ಅಧ್ಯಕ್ಷ ಸಲೀಂ ಪಕೀರ್ಣಕಟ್ಟೆ, ಜುನೈದ್ ಉಚ್ಚಿಲ, ಝುಬೇರ್ ಉಚ್ಚಿಲ, ಯಹ್‌ಕೂಭ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಪದಾಕಾರಿ ಎಂ.ಕೆ. ಇಬ್ರಾಹಿಂ ಮಜೂರು ಸ್ವಾಗತಿಸಿದರು. ಉಚ್ಚಿಲ ಸೆಕ್ಟರ್ ಕಾರ್ಯದರ್ಶಿ ಅಶ್ರಫ್ ಆಲಿ ವಂದಿಸಿದರು.







