ಹಸಿವೆಯಿಂದ ಮೃತಪಟ್ಟ ಬಾಲಕಿಯರಿಗೆ ‘ನಿಗೂಢ ಔಷಧಿ’ ಕುಡಿಸಿದ್ದ ತಂದೆ
ವಿಚಿತ್ರವಾಗಿದೆ ತನಿಖಾ ವರದಿ

ಹೊಸದಿಲ್ಲಿ, ಜು.28: ದಿಲ್ಲಿಯಲ್ಲಿ ಮೂವರು ಸಹೋದರಿಯರು ಹಸಿವಿನಿಂದ ಬಳಲಿ ಸಾವನ್ನಪ್ಪಿರುವ ಪ್ರಕರಣದ ಕುರಿತು ನಡೆಸಿರುವ ತನಿಖಾ ವರದಿಯಲ್ಲಿ, ಮಕ್ಕಳ ತಂದೆ ನೀಡಿರುವ ‘ಗುರುತಿಸಲಾಗದ ಔಷಧಿ’ ಸೇವಿಸಿದ ಕಾರಣ ಮರಣ ಸಂಭವಿಸಿರಬಹುದು ಎಂದು ತಿಳಿಸಲಾಗಿದೆ. ತಂದೆ ನೀಡಿದ ‘ಗುರುತಿಸಲಾಗದ ಔಷಧಿ’ ಸೇವಿಸಿದ ಬಳಿಕ ಮಕ್ಕಳು ಸಾವನ್ನಪ್ಪಿರಬಹುದು ಎಂದು ಪ್ರಕರಣದ ತನಿಖೆ ನಡೆಸಿದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅರುಣ್ ಗುಪ್ತ ನೀಡಿದ ವರದಿಯಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣದ ಆಳವಾದ ತನಿಖೆ ನಡೆಸುವಂತೆ ದಿಲ್ಲಿ ಸರಕಾರ ಡಿಸಿಪಿ(ಪೂರ್ವ)ಗೆ ಸೂಚಿಸಿದೆ. ವರದಿಯನ್ನು ದಿಲ್ಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾರಿಗೆ ಸಲ್ಲಿಸಲಾಗಿದೆ. ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮೂವರು ಬಾಲಕಿಯರಿಗೆ ದಿನಾ ಕೆಲವು ಆಹಾರಗಳನ್ನು ಒದಗಿಸಲಾಗುತ್ತಿತ್ತು. ಅಲ್ಲದೆ ಈ ಮೂವರು ಅಪ್ರಾಪ್ತ ಬಾಲಕಿಯರು ಹೊಟ್ಟೆಯ ಸೋಂಕುರೋಗದ ಕಾರಣ ವಾಂತಿ ಭೇದಿಯ ಸಮಸ್ಯೆಗೆ ಒಳಗಾಗಿದ್ದರು. ಇದು ಉದ್ದೇಶಪೂರ್ವಕ ಕೃತ್ಯದಿಂದ ಅಥವಾ ನಿರ್ಲಕ್ಷದ ಕಾರಣದಿಂದ ಆಗಿರುವ ಸಾವಾಗಿದೆ. ಮಕ್ಕಳು ಸಾವನ್ನಪ್ಪಿದ್ದ ದಿನದ ಹಿಂದಿನ ರಾತ್ರಿ ಬಿಸಿನೀರಿನಲ್ಲಿ ಮಿಶ್ರ ಮಾಡಿ ಕೆಲವು ಗುರುತಿಸಲಾಗದ ಔಷಧಿಗಳನ್ನು ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಘಟನೆ ಬೆಳಕಿಗೆ ಬಂದ ದಿನವಾದ ಮಂಗಳವಾರದಿಂದ ಬಾಲಕಿಯರ ತಂದೆ ಮಂಗಲ್ ಸಿಂಗ್ ನಾಪತ್ತೆಯಾಗಿದ್ದಾನೆ. ಮಂಗಲ್ ಸಿಂಗ್ ನಾಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ವರದಿ ತಯಾರಿಸಲು ಸಹಕರಿಸಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೆ.ಮಹೇಶ್ ತಿಳಿಸಿದ್ದಾರೆ. ಅಲ್ಲದೆ ವಿವಿಧ ವಯೋಮಾನದ (2, 4 ಮತ್ತು 8 ವರ್ಷದ) ಬಾಲಕಿಯರು ಒಂದೇ ದಿನ, ಅದೂ ಬೆಳಗ್ಗಿನ ಅವಧಿಯಲ್ಲೇ ಮೃತಪಟ್ಟಿರುವುದೂ ಸಂಶಯಾಸ್ಪದವಾಗಿದೆ. ವಾಂತಿ ಬೇಧಿಯಿಂದ ಬಳಲುತ್ತಿದ್ದರೂ ಬಾಲಕಿಯರಿಗೆ ಸಾಕಷ್ಟು ಪ್ರಮಾಣದಲ್ಲಿ ಒಆರ್‌ಎಸ್ ನೀಡಿಲ್ಲ ಎಂದು ಮಹೇಶ್ ಹೇಳಿದ್ದಾರೆ.
ಮೃತಪಟ್ಟ ಸಂದರ್ಭದಲ್ಲಿ ಮಕ್ಕಳ ಹೊಟ್ಟೆಯಲ್ಲಿ ಆಹಾರದ ಅಥವಾ ನೀರಿನ ಅಂಶ ಇರಲಿಲ್ಲ. ಆದ್ದರಿಂದ ಇದು ಹಸಿವಿನಿಂದ ಬಳಲಿ ಸಂಭವಿಸಿದ ಸಾವು ಎಂಬ ಪ್ರಾಥಮಿಕ ಮರಣೋತ್ತರ ವರದಿಯನ್ನೇ ಪೊಲೀಸರು ನೆಚ್ಚಿಕೊಂಡಿದ್ದಾರೆ. ಆದರೆ ತೀವ್ರ ಬೇಧಿಯಿದ್ದಾಗಲೂ ಹೊಟ್ಟೆ ಸಂಪೂರ್ಣ ಖಾಲಿಯಾಗುತ್ತದೆ. ಆದ್ದರಿಂದ ಈ ಅಂಶವನ್ನು ಮಾತ್ರ ಆಧರಿಸಿ ಉಪವಾಸವಿದ್ದ ಕಾರಣ ಬಾಲಕಿಯರ ಸಾವು ಸಂಭವಿಸಿದೆ ಎಂದು ಹೇಳಲಾಗದು ಎಂದು ದಿಲ್ಲಿ ಉಪಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂತಃಸ್ರಾವದ ಕುರಿತ ವರದಿ ಇನ್ನೂ ಬಂದಿಲ್ಲ. ಆದ್ದರಿಂದ ಪೊಲೀಸರು ಕೂಲಂಕುಷ ತನಿಖೆ ನಡೆಸುವ ಅಗತ್ಯವಿದೆ ಎಂದವರು ಹೇಳಿದ್ದಾರೆ.
ಆದರೆ ಮೂವರು ಬಾಲಕಿಯರ ಮರಣೋತ್ತರ ಪರೀಕ್ಷೆ ನಡೆಸಿದ್ದ ಲಾಲ್‌ಬಹಾದ್ದೂರ್ ಶಾಸ್ತ್ರಿ ಆಸ್ಪತ್ರೆಯ ವೈದ್ಯರು ಬಾಲಕಿಯರ ಸಾವಿಗೆ ಹಸಿವಿನಿಂದ ಬಳಲಿರುವುದೇ ಕಾರಣ ಎಂದು ಪುನರುಚ್ಚರಿಸಿದ್ದಾರೆ. “ನನ್ನ ವೈದ್ಯಕೀಯ ವೃತ್ತಿಯಲ್ಲಿ ಇದೇ ಪ್ರಥಮ ಬಾರಿಗೆ ಈ ರೀತಿಯ ಸಮಗ್ರ ಉಪವಾಸದ ಪ್ರಕರಣವನ್ನು ನೋಡಿದ್ದೇನೆ. ಬಾಲಕಿಯರ ಸಾವಿಗೆ ಇತರ ಯಾವುದೇ ಕಾರಣಗಳನ್ನು ನಾವು ತಳ್ಳಿಹಾಕುತ್ತೇವೆ ಎಂದು ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ. ಈ ಮಕ್ಕಳ ಸ್ಥಿತಿ ಎಷ್ಟು ಗಂಭೀರವಾಗಿತ್ತು ಎಂದರೆ ಹೊಟ್ಟೆಗೆ ಆಹಾರವಸ್ತು ಬಿದ್ದೊಡನೆ ವಾಂತಿಯಾಗುತ್ತಿತ್ತು. ಹಲವು ದಿನಗಳಿಂದ ಆಹಾರ ಸೇವಿಸದಿದ್ದರೆ ಆಗ ವ್ಯಕ್ತಿಯ ದೇಹ ಆಹಾರ ಸ್ವೀಕರಿಸಲು ನಿರಾಕರಿಸುತ್ತದೆ. ಅಲ್ಲದೆ ವಿಷಪ್ರಾಶನ ಅಥವಾ ಔಷಧಿಯ ಅಡ್ಡಪರಿಣಾಮ ಆಗಲೂ ಸಾಧ್ಯವಿಲ್ಲ. ಯಾಕೆಂದರೆ ದೇಹದಲ್ಲಿ ಸ್ವಲ್ಪ ಪ್ರಮಾಣದಲ್ಲಾದರೂ ಕೊಬ್ಬಿನ ಅಂಶ ಇದ್ದರೆ ಮಾತ್ರ ಔಷಧಿ ನಾಟುತ್ತದೆ. ಆದರೆ ಈ ಮಕ್ಕಳ ದೇಹದಲ್ಲಿ ಕೊಬ್ಬಿನ ಅಂಶವೇ ಇರಲಿಲ್ಲ. ಔಷಧಿಯ ಅಡ್ಡಪರಿಣಾಮದ ಸಮಸ್ಯೆಯಿದ್ದರೆ ದೇಹದ ಅಂಗಗಳಲ್ಲಿ ಇದರ ಲಕ್ಷಣ ಕಂಡುಬರುತ್ತದೆ. ಇದ್ಯಾವುದೂ ಈ ಪ್ರಕರಣದಲ್ಲಿ ನಡೆದಿಲ್ಲ” ಎಂದು ವೈದ್ಯರು ತಿಳಿಸಿದ್ದಾರೆ. ಈ ಮಕ್ಕಳ ತಾಯಿ ಈಗ ಭಾವೋದ್ರಿಕ್ತ ಸ್ಥಿತಿಯಲ್ಲಿದ್ದು ಈಕೆಯನ್ನು ದಿಲ್ಲಿಯ ‘ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಆ್ಯಂಡ್ ಅಲಯ್ಡ್ ಸೈಯನ್ಸಸ್’ಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕಿಯ ಬ್ಯಾಂಕ್ ಖಾತೆಯಲ್ಲಿ 1,805 ರೂ. ಇತ್ತು ಈ ಮಧ್ಯೆ, ಹಿರಿಯ ಹುಡುಗಿ ಮಾನ್ಸಿ(8ವರ್ಷ) ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯೊಂದನ್ನು ಹೊಂದಿದ್ದು ಅದರಲ್ಲಿ 1,805 ರೂ. ಇತ್ತು ಎಂಬ ಕುತೂಹಲಕಾರಿ ಅಂಶವನ್ನು ವರದಿಯಲ್ಲಿ ತಿಳಿಸಲಾಗಿದೆ. ಸೋಮವಾರ ತೀವ್ರವಾಗಿ ಅಸೌಖ್ಯಗೊಂಡಿದ್ದ ಮಾನ್ಸಿಗೆ ಮಧ್ಯಾಹ್ನದ ಊಟ ನೀಡಲಾಗಿತ್ತು. ಆದರೆ ಆಕೆಗೆ ಹೆಚ್ಚು ಊಟ ಮಾಡಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ.







