ಪಾಕ್ ಅಧಿಕೃತ ಚುನಾವಣಾ ಫಲಿತಾಂಶ ಪ್ರಕಟ: ಪಿಟಿಐಗೆ 115 ಸ್ಥಾನ
ಸರಕಾರ ರಚಿಸಲು 21 ಸ್ಥಾನಗಳ ಕೊರತೆ

ಇಸ್ಲಾಮಾಬಾದ್, ಜು. 28: 270 ಸದಸ್ಯ ಬಲದ ಪಾಕಿಸ್ತಾನದ ಸಂಸತ್ತು ನ್ಯಾಶನಲ್ ಅಸೆಂಬ್ಲಿಯಲ್ಲಿ 115 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್‌ರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಚುನಾವಣಾ ಆಯೋಗದ ಅಂತಿಮ ಫಲಿತಾಂಶ ತಿಳಿಸಿದೆ.
ಸರಳ ಬಹುಮತಕ್ಕೆ 137 ಸ್ಥಾನಗಳ ಅಗತ್ಯವಿದ್ದು, ಸರಕಾರ ರಚಿಸಲು ಪಿಟಿಐಗೆ 21 ಸ್ಥಾನಗಳ ಕೊರತೆ ಎದುರಾಗಿದೆ.
ಬುಧವಾರ ನಡೆದ ಚುನಾವಣೆಯ ಫಲಿತಾಂಶಗಳು ಭಾರೀ ನಿಧಾನಗತಿಯಲ್ಲಿ ಹೊರಬಂದಿದ್ದು, ಸೋತ ರಾಜಕೀಯ ಪಕ್ಷಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿವೆ.
ಜೈಲಿನಲ್ಲಿರುವ ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) 64 ಸ್ಥಾನಗಳನ್ನು ಗೆದ್ದರೆ, ಮಾಜಿ ಅಧ್ಯಕ್ಷ ಅಸಿಫ್ ಅಲಿ ಝರ್ದಾರಿಯ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) 43 ಸ್ಥಾನಗಳನ್ನು ಗಳಿಸಿ ತೃತೀಯ ಸ್ಥಾನದಲ್ಲಿದೆ ಎಂದು ಆಯೋಗ ಪ್ರಕಟಿಸಿದೆ.
ಮುತ್ತಾಹಿದಾ ಮಜ್ಲಿಸೆ ಅಮಲ್ ಪಾಕಿಸ್ತಾನ್ (ಎಂಎಂಎಪಿ) 13 ಸ್ಥಾನಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
13 ಪಕ್ಷೇತರರು ಜಯಿಸಿದ್ದು ಸರಕಾರ ರಚನೆಯಲ್ಲಿ ಮಹತ್ವದ ಪಾತ್ರವಹಿಸುವ ನಿರೀಕ್ಷೆಯಿದೆ. ಸರಕಾರ ರಚಿಸಲು ಪಿಟಿಐ ಪಕ್ಷವು ಅವರ ಬೆಂಬಲವನ್ನು ಕೋರಬಹುದಾಗಿದೆ.
ಭಯೋತ್ಪಾದಕರನ್ನು ತಿರಸ್ಕರಿಸಿದ ಪಾಕ್ ಜನತೆ
ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರ ಹಫೀಝ್ ಸಯೀದ್ ಬೆಂಬಲಿತ ಅಲ್ಲಾಹೋ ಅಕ್ಬರ್ ತೆಹ್ರೀಕ್ ಸೇರಿದಂತೆ ಭಯೋತ್ಪಾದಕ ಮತ್ತು ನಿಷೇಧಿತ ಗುಂಪುಗಳನ್ನು ಈ ಬಾರಿಯ ಚುನಾವಣೆಯಲ್ಲಿ ಪಾಕಿಸ್ತಾನಿ ಮತದಾರರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
ಸಯೀದ್ ಬೆಂಬಲಿತ ಪಕ್ಷಕ್ಕೆ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ.
ಆ ಪಕ್ಷ ಒಟ್ಟು 1,71,441 ಮತಗಳನ್ನು ಪಡೆದಿದೆ. ಚಲಾವಣೆಯಾದ ಸುಮಾರು 5 ಕೋಟಿ ಮತಗಳಿಗೆ ಹೋಲಿಸಿದರೆ ಇದು ನಗಣ್ಯವಾಗಿದೆ.
ಸಮ್ಮಿಶ್ರ ಸರಕಾರ ರಚನೆಗೆ ಮಾತುಕತೆ ಆರಂಭ
ಸಮ್ಮಿಶ್ರ ಸರಕಾರ ರಚಿಸುವುದಕ್ಕಾಗಿ ಇಮ್ರಾನ್ ಖಾನ್‌ರ ಪಕ್ಷ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಶನಿವಾರ ಪಕ್ಷೇತರರು ಮತ್ತು ಸಣ್ಣ ಪಕ್ಷಗಳೊಂದಿಗೆ ಮಾತುಕತೆ ಆರಂಭಿಸಿದೆ.
‘‘ನಾವು ಸಣ್ಣ ಪಕ್ಷಗಳು ಮತ್ತು ಪಕ್ಷೇತರ ಸದಸ್ಯರನ್ನು ಸಂಪರ್ಕಿಸುತ್ತಿದ್ದೇವೆ. ಅವರು ಶೀಘ್ರದಲ್ಲೇ ಇಸ್ಲಾಮಾಬಾದ್‌ನಲ್ಲಿ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ’’ ಎಂದು ಪಕ್ಷದ ವಕ್ತಾರ ಫಾವದ್ ಚೌಧರಿ ಹೇಳಿದ್ದಾರೆ.







