ಆಳ್ವಾಸ್ ಕಾಲೇಜಿನ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ: ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಮೂಡುಬಿದಿರೆ, ಜು.28: ತುಳು ಭಾಷೆ ಮತ್ತು ಸಾಹಿತ್ಯ ನಿರಂತರವಾಗಿ ಅಭಿವೃದ್ದಿ ಹೊಂದುತ್ತಾ ಬರುತ್ತಿದ್ದು, ಅದರ ಇನ್ನೊಂದು ಮಗ್ಗುಲಲ್ಲಿ ತುಳು ಸಂಸ್ಕೃತಿಯ ಬೆಳವಣಿಗೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗದೇ ಇರುವುದು ವಿಷಾದಕರ ಎಂದು ವಿಶ್ರಾಂತ ಪ್ರಾಧ್ಯಾಪಕ ಹಾಗೂ ಇತಿಹಾಸ ತಜ್ಞ ಡಾ ಗಣಪತಿ ಭಟ್ ಪುಂಡಿಕಾ ತಿಳಿಸಿದರು.
ಶನಿವಾರ ಕುವೆಂಪು ಸಭಾಭವನದಲ್ಲಿ ಆಳ್ವಾಸ್ ಕಾಲೇಜಿನ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಇದರ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ವಿಶೇಷ ಉಪನ್ಯಾಸ ’’ತುಳುವಿನ ನೆಲೆ, ಬೆಲೆ’’ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುಳು ಸಂಸ್ಕೃತಿ ತಿರುವಿನ ಕಾಲದಲ್ಲಿ ಇದ್ದು, ಆಧುನಿಕತೆಯ ಭರಾಟೆ ತುಳು ಸಂಸ್ಕೃತಿ ಯನ್ನು ವಿಕೃತಿಯತ್ತಾ ಒಯ್ಯುತ್ತಿದೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ, ನಮ್ಮೆಲ್ಲರ ಆವಜ್ಞೆಯಿಂದ ತುಳು ಸಂಸ್ಕೃತಿಯ ಭಾಗವಾದ ಭೂತಾರಾಧನೆ, ನಾಗಮಂಡಲದಂತಹ ಪವಿತ್ರ ಕಾರ್ಯವು ಸೇರಿದಂತೆ ಇನ್ನೂ ಹಲವು ಸಂಸ್ಕೃತಿಗಳು ವೈದಿಕ ಪರಂಪರೆಯತ್ತಾ ಸಾಗುತ್ತಿದೆ ಎಂದರು. ಆದ್ದರಿಂದ ತುಳು ಭಾಷೆ ಹಾಗೂ ಸಂಸ್ಕೃತಿ ಎರಡರ ಸಮ್ಮಿಳಿತದ ಸಂವರ್ಧನೆ ಈ ಕಾಲಘಟ್ಟದ ಅಗತ್ಯ ಎಂದರು.
ಹೆಚ್ಚಿನ ವಿದ್ವಾಂಸರ ಒಪ್ಪುವಂತೆ, ತುಳು ಎಂಬ ಪದ ನೀರಿನ ಮೂಲದಿಂದ ಬಂದಿದ್ದು, ಈ ಪದ ಭಾಷೆಯನ್ನು ಸೂಚಿಸದೇ, ಒಂದು ಪ್ರದೇಶದಲ್ಲಿ ವಾಸಿಸುವ ಜನರನ್ನು ಸೂಚಿಸುತ್ತದೆ. ಸೀಮಿತ ವಲಯದಲ್ಲಿ ಮಾತನಾಡುವ ಭಾಷೆಯಾಗಿ, ಸರ್ವರು ಒಪ್ಪುವ ಲಿಪಿ ಇರದೆ, ರಾಜಾಶ್ರಯದ ಕೊರತೆಯಿಂದ, ಸ್ಥಳೀಯ ಜನರ ನಿರ್ಲಕ್ಷಕ್ಕೆ ಒಳಗಾಗಿ ಈ ಭಾಷೆ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಹೊಂದಿಲ್ಲ ಎಂದರು.
ಆದರೆ ಇತ್ತೀಚಿನ ದಿನಗಳಲ್ಲಿ ತುಳು ನಾಟಕ, ಸಿನಿಮಾ, ಸಾಹಿತ್ಯಗಳ ಮಹತ್ವದ ಪಾತ್ರದಿಂದ ಈ ಭಾಷೆ ಹೆಚ್ಚು ಪ್ರಚಲಿತವಾಗುತ್ತಿದೆ. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ಪ್ರಪಂಚದಾದ್ಯಂತ (2011ರ ಸೆನ್ಸಸ್‌ನ ವರದಿಯ ಆದಾರದಂತೆ) ಸುಮಾರು 18,50,000 ಸಾವಿರ ಜನರು ಮಾತನಾಡುತ್ತಿದ್ದು, ಕೇಂದ್ರಾಡಳಿತ ಪ್ರದೇಶವು ಸೇರಿದಂತೆ ಭಾರತದಲ್ಲಿ 33 ರಾಜ್ಯಗಳಲ್ಲಿ ಈ ಭಾಷೆಯನ್ನು ಬಳಸಲಾಗುತ್ತಿದೆ. ಈಗ ತುಳು ಭಾಷೆ ಶಿಕ್ಷಣದ ಮಾದ್ಯಮವಾಗಿ ಬೆಳದಿದ್ದು ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ 33 ಶಾಲೆಗಳಲ್ಲಿ ಈ ಭಾಷೆಯನ್ನು ಅದ್ಯಯನದ ವಿಷಯವಾಗಿ ಬಳಸಲಾಗುತ್ತಿದೆ. ತುಳು ಜನಪದ ಅಕಾಡೆಮಿ, ತುಳು ಅಕಾಡೆಮಿಗಳು ಈ ಭಾಷೆಯ ಸಂವರ್ಧನೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತಿವೆ ಎಂದರು.
ಕಾರ್ಯಕ್ರಮವನ್ನು ಮಾರ್ಟಿನ್ ಸ್ವಾಗತಿಸಿದರು, ವಿದ್ಯಾರ್ಥಿನಿ ಅಕ್ಷಿತ ನಿರೂಪಿಸಿದರು. ಪ್ರಣವ್ ವಂದಿಸಿದರು. ಈ ಸಂದರ್ಭದಲ್ಲಿ ಆಳ್ವಾಸ್ ಪ್ರಾಚಾರ್ಯ ಡಾ. ಕುರಿಯನ್, ಕಾಲೇಜಿನ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಯೋಗಿಶ್ ಕೈರೋಡಿ, ಉಪನ್ಯಾಸಕ ಅಶೋಕ ಕೆ.ಜಿ ಉಪಸ್ಥಿತರಿದ್ದರು.







